ಸಿದ್ಧತೆ-ಬದ್ಧತೆಯೊಂದಿಗೆ ಸದನಕ್ಕೆ ಬನ್ನಿ: ಸಿಎಂ
ಬೆಂಗಳೂರು, ಜೂ. 30: ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳುವ ವೇಳೆ ಸದಸ್ಯರಲ್ಲಿ ಬದ್ಧತೆ ಹಾಗೂ ಸಿದ್ಧತೆ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಲ್ಮನೆ ನೂತನ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.
ಗುರುವಾರ ವಿಧಾನಮಂಡಲ ತರಬೇತಿ ಸಂಸ್ಥೆ ವಿಧಾನ ಪರಿಷತ್‌ಗೆ ಆಯ್ಕೆಯಾದ ನೂತನ ಸದಸ್ಯರಿಗೆ ಏರ್ಪಡಿಸಿದ್ದ ಎರಡು-ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದನವನ್ನು ಪ್ರವೇಶಿಸುವ ಮುನ್ನ ಸದಸ್ಯರು, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವೇಳೆ ತೋರುವ ಆಸಕ್ತಿ ಹಾಗೂ ಕುತೂಹಲವನ್ನು ತೋರಿದಂತೆ ವಿಷಯ ಅಧ್ಯಯನ ಮಾಡಿರಬೇಕು ಎಂದು ಸೂಚಿಸಿದರು.
ಸದನವು ಯಾವುದೇ ಕಾಲಕ್ಕೂ ಕಾಲಹರಣದ ವೇದಿಕೆ ಆಗಬಾರದು. ಚರ್ಚೆಯಲ್ಲಿ ಪಾಲ್ಗೊಳ್ಳುವ ವೇಳೆ ಆವೇಶ ಹಾಗೂ ಉದ್ವೇಗಕ್ಕೆ ಒಳಗಾಗುವುದು ಒಳಿತಲ್ಲ. ಅಂತಹ ಸನ್ನಿವೇಶಗಳು ಎದುರಾದಲ್ಲಿ ಹೇಳಬೇಕಾದುದನ್ನು ಹೇಳಲು ಸಾಧ್ಯ ಆಗುವುದಿಲ್ಲ. ಸದಸ್ಯರಲ್ಲಿನ ಹಾಸ್ಯ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಉತ್ತಮ ಸಂಸದೀಯ ಪಟುಗಳನ್ನು ರೂಪಿಸಬಲ್ಲದು ಎಂದ ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರನ್ನು ಸ್ಮರಿಸಿದರು.
ಇತ್ತೀಚೆಗೆ ಸದಸ್ಯರು ಸದನದಲ್ಲಿ ಕುಳಿತುಕೊಳ್ಳುವ ಅಭ್ಯಾಸವನ್ನೇ ಮರೆಯುತ್ತಿದ್ದಾರೆ. ಇತರೆ ಕಾರ್ಯಗಳಲ್ಲೇ ತೊಡಗುತ್ತಿದ್ದಾರೆ. ಇದು ಸಂಪ್ರದಾಯವಲ್ಲ. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗೆ ಸದನವು ವೇದಿಕೆಯಾಗಬಾರದು. ಸದನದಲ್ಲಿ ಓರ್ವ ಸದಸ್ಯರು ಪ್ರಸ್ತಾಪಿಸಿದ ವಿಷಯಗಳನ್ನೇ ಮತ್ತೊಬ್ಬರು ಪುನರಾವರ್ತನೆ ಮಾಡಿದಲ್ಲಿ ಸದನದ ಸಮಯವನ್ನು ಅಪವ್ಯಯ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.
ನೂತನ ಸದಸ್ಯರು ವಿಧಾನಮಂಡಲ ಗ್ರಂಥಾಲಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವ ಕಲೆ ರೂಢಿಸಿಕೊಳ್ಳಬೇಕು. ಅಧಿವೇಶನದ ವೇಳೆ ಮಾತ್ರವಲ್ಲ, ಅಧಿವೇಶನ ಇಲ್ಲದ ಸಂದರ್ಭದಲ್ಲೂ ಸದಸ್ಯರು ಬೆಂಗಳೂರಿಗೆ ಬಂದಾಗ ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆದಲ್ಲಿ ಬಹಳಷ್ಟು ವಿಚಾರ ತಿಳಿಯುತ್ತವೆ. ಸದಸ್ಯರ ಜ್ಞಾನ ವಿಸ್ತಾರಗೊಳ್ಳುತ್ತದೆ. ನೂತನ ಸದಸ್ಯರು ತಮ್ಮ ಹಿರಿಯ ಸದಸ್ಯರೊಂದಿಗೆ ಸ್ನೇಹ ಬೆಳೆಸಿಕೊಂಡಲ್ಲಿ ಅವರ ಅನುಭವ-ಮಾರ್ಗದರ್ಶನದ ಲಾಭ ಪಡೆಯಬಹುದು ಎಂದು ಅವರು ಹೇಳಿದರು.
ಪ್ರಜೆಗಳೇ ಪ್ರಭುಗಳು. ನಮ್ಮನ್ನು ಚುನಾಯಿಸುವ ಮೂಲಕ ತಮ್ಮ ಹಿತವನ್ನು ಕಾಯುವ ಜವಾಬ್ದಾರಿಯನ್ನು ಜನರು ನಮಗೆ ಕೊಟ್ಟಿದ್ದಾರೆ. ನಾವು ಅವರ ಹಿತ ಕಾಪಾಡುವ ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ. ಅಂಬೇಡ್ಕರ್ ಅವರ ಸಂವಿಧಾನದ ಪುಸ್ತಕವನ್ನು ಅಧ್ಯಯನ ಮಾಡಿ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿ ಹಿಡಿಯಿರಿ. ಅಂತೆಯೇ, ನಿಯಮಾವಳಿಗಳ ಕೈಪಿಡಿಯಲ್ಲಿ ಅಡಕಗೊಂಡಿರುವ ಅಂಶಗಳನ್ನು ಪಾಲಿಸಿ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಿರಿ ಎಂದರು.
ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸದಸ್ಯರಲ್ಲಿ ಪತ್ರಕರ್ತರ ಗ್ಯಾಲರಿ ನೋಡಿ ಮಾತನಾಡುವ ಮನೋಭಾವ ದೂರವಾಗಬೇಕು. ರಾಷ್ಟ್ರದಲ್ಲಿ ಕೇವಲ ಏಳು ರಾಜ್ಯಗಳಲ್ಲಿ ಮೇಲ್ಮನೆಯಿದೆ. ವಿಧಾನಸಭೆಯಲ್ಲಿ ಚರ್ಚೆ ಆಗುವ ವಿಷಯಗಳಿಗೆ ಪೂರಕವಾಗಿ ವಿಧಾನ ಪರಿಷತ್ತಿನಲ್ಲೂ ಅರ್ಥಗರ್ಭಿತ, ಗಂಭೀರ ಚರ್ಚೆಯಾಗಬೇಕು. ಸದನವು ಜನತೆಯ ಆಶೋತ್ತರಗಳನ್ನು ಈಡೇರಿಸುವ ಉತ್ತಮ ವೇದಿಕೆ ಆಗಬೇಕು ಎಂದು ಆಶಿಸಿದರು.
ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸ್ಪೀಕರ್ ಎನ್.ಎಚ್.ಶಿವಶಂಕರ ರೆಡ್ಡಿ, ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್, ಡಿ.ಕೆ.ಶಿವಕುಮಾರ್, ಮೇಲ್ಮನೆ ಕಾರ್ಯದರ್ಶಿ ಶ್ರೀನಿವಾಸ್, ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ತರಬೇತಿ ಶಿಬಿರದಲ್ಲಿ ಮೇಲ್ಮನೆ ನೂತನ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಬಿ.ಜಿ. ಪಾಟೀಲ್, ವಿವೇಕ್‌ರಾವ್ ವಸಂತರಾವ್ ಪಾಟೀಲ್, ಎಂ.ಕೆ.ಪ್ರಾಣೇಶ್, ರಿಝ್ವಾನ್ ಅರ್ಷದ್ ಹಾಗೂ ವೀಣಾ ಅಚ್ಚಯ್ಯ ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.
ಇತ್ತೀಚೆಗೆ ಸದಸ್ಯರು ಸದನದಲ್ಲಿ ಕುಳಿತುಕೊಳ್ಳುವ ಅಭ್ಯಾಸವನ್ನೇ ಮರೆಯುತ್ತಿದ್ದಾರೆ. ಇತರೆ ಕಾರ್ಯ ಗಳಲ್ಲೇ ತೊಡಗುತ್ತಿದ್ದಾರೆ. ಇದು ಸಂಪ್ರದಾಯವಲ್ಲ. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗೆ ಸದನವು ವೇದಿಕೆಯಾಗಬಾರದು. ಸದನದಲ್ಲಿ ಓರ್ವ ಸದಸ್ಯರು ಪ್ರಸ್ತಾಪಿಸಿದ ವಿಷಯಗಳನ್ನೇ ಮತ್ತೊಬ್ಬರು ಪುನರಾವರ್ತನೆ ಮಾಡಿದಲ್ಲಿ ಸದನದ ಸಮಯವನ್ನು ಅಪವ್ಯಯ ಮಾಡಿದಂತೆ ಆಗುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ