×
Ad

‘ಸಂರಕ್ಷಣಾ ತಂತ್ರಾಂಶ’ಕ್ಕೆ ಮುಖ್ಯಮಂತ್ರಿ ಚಾಲನೆ

Update: 2016-06-30 23:38 IST

ಬೆಂಗಳೂರು, ಜೂ.30: ರೈತರ ಬೆಳೆ ವಿಮೆಗೆ ಆನ್‌ಲೈನ್ ನೋಂದಣಿ ಸೌಲಭ್ಯ ಕಲ್ಪಿಸುವ ಸಂರಕ್ಷಣಾ ತಂತ್ರಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಮಾಡಿದರು.
ಬೆಳೆ ವಿಮೆಗಾಗಿ ರೈತರ ಆನ್‌ಲೈನ್ ನೋಂದಣಿಯು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಮತ್ತು ಪುನಾರಚಿತ ಹವಾಮಾನ-ಆಧಾರಿತ ಬೆಳೆ ವಿಮೆ ಯೋಜನೆಯ ಸಂಯೋಜನೆ ಇದಾಗಿದೆ.
ಅನಿರೀಕ್ಷಿತ ಘಟನೆಗಳಿಂದ ಮತ್ತು ದುರಂತಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ಸಂಭವಿಸುವ ಸಂಕಷ್ಟದಲ್ಲಿ ರೈತರಿಗೆ ಆರ್ಥಿಕವಾಗಿ ನೆರವಾಗಲು ಭಾರತ ಸರಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನಾರಚಿತ ಹವಾಮಾನ-ಆಧಾರಿತ ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತಂದಿದೆ.
2016-17ನೆ ಸಾಲಿನ ರಾಜ್ಯದ ಬಜೆಟ್‌ನಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳೂ ಸೇರಿದಂತೆ ಹಲವಾರು ಕಾರಣ ಗಳಿಂದ ಬೆಳೆ ನಷ್ಟ ಸಂಭವಿಸಿದಾಗ ರೈತನ ನೆರವಿಗೆ ಬರಲು ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಯನ್ನು ಪ್ರಸಕ್ತ ಸಾಲಿನಿಂದ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಈ ಉದ್ದೇಶಕ್ಕಾಗಿ ರಾಜ್ಯ ಸರಕಾರದ ವಂತಿಗೆಯಾಗಿ 675.38 ಕೋಟಿ ರೂ. ನಿಗದಿಪಡಿಸಲಾಗಿತ್ತು.
ಸರಕಾರವು ವಿಮಾ ಕಂತಿನ ಮಿತಿಯನ್ನು ತೆಗೆದು ಹಾಕಿದೆ. ರೈತರು ಪಾವತಿಸಬೇಕಾದ ವಿಮಾ ಕಂತಿನ ಹೊರೆಯನ್ನು ಕಡಿಮೆ ಮಾಡಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಪಾವತಿಸಬೇಕಾದ ವಿಮಾ ಕಂತಿನ ಪ್ರಮಾಣವನ್ನು ಆಹಾರ ಧಾನ್ಯಗಳು ಮತ್ತು ಎಣ್ಣೆಗಳು ಬೆಳೆಗಳಿಗೆ ಶೇ.1.5ರಿಂದ ಶೇ.2ರವರೆಗೆ ಮತ್ತು ವಾರ್ಷಿಕ ವಾಣಿಜ್ಯ ಅಥವಾ ವಾರ್ಷಿಕ ತೋಟಗಾರಿಕಾ ಬೆಳೆಗಳಿಗೆ ಶೇ.5ಕ್ಕೆ ನಿಗದಿಪಡಿಸಿದೆ.
ರಾಜ್ಯ ಸರಕಾರವು ಶೇ.50ರಷ್ಟು ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಉತ್ಸುಕವಾಗಿದೆ. ರೈತರು ಪಾವತಿಸಬೇಕಾದ ವಿಮಾ ಕಂತಿನ ಪ್ರಮಾಣವು ಕಡಿಮೆ ಇರುವುದರಿಂದ ಅಧಿಕ ಸಂಖ್ಯೆಯ ರೈತರು ನೋಂದಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಫಸಲಿನ ಬೆಳವಣಿಗೆಯ ವಿವಿಧ ಹಂತಗಳಿಂದ ಹಿಡಿದು ಅಂತಿಮವಾಗಿ ವಿಮಾ ಮೊತ್ತವನ್ನು ಪಾವತಿಸುವವರೆಗೆ ಪ್ರತಿಯೊಬ್ಬ ರೈತನಿಗೆ ಸಂಬಂಧಿಸಿದ ಅಂಕಿ-ಅಂಶಗಳ ನಿಗಾ ವಹಿಸಿ ನಿರ್ವಹಿಸಬೇಕಾಗಿದೆ. ಈ ಕಾರಣಗಳಿಂದಾಗಿ ಬೆಳೆ ವಿಮೆ ಪ್ರಕ್ರಿಯೆಯನ್ನು ಆದಿಯಿಂದ ಅಂತ್ಯದವರೆಗೆ ಗಣಕೀಕೃತಗೊಳಿಸುವ ಸಲುವಾಗಿ ಸಂರಕ್ಷಣೆ ತಂತ್ರಾಂಶವನ್ನು ಸರಕಾರವು ಅಭಿವೃದ್ಧಿಪಡಿಸಿದೆ.
 ರೈತರಿಗೆ ಲಾಭಗಳು: ಒಮ್ಮೆ ರೈತನ ಅರ್ಜಿ ಅಥವಾ ಪ್ರಸ್ತಾವನೆಯನ್ನು ಗಣಕೀಕೃತ ವ್ಯವಸ್ಥೆಗೆ ಭರ್ತಿ ಮಾಡಿದ ತಕ್ಷಣವೇ ನಿರ್ದಿಷ್ಟ ಅರ್ಜಿ ಸಂಖ್ಯೆ ಸೃಷ್ಟಿಯಾಗಲಿದೆ. ಈ ಸಂಖ್ಯೆಯನ್ನು ಬಳಸುವುದರ ಮೂಲಕ ರೈತನು ವಿಮಾ ಮೊತ್ತ ಪಾವತಿ ತನ್ನ ವಿಮಾ ಪ್ರಸ್ತಾವನೆಯ ವಿವಿಧ ಹಂತಗಳನ್ನು ಎಸ್‌ಎಂಎಸ್ ಮೂಲಕ ಅಥವಾ ಅಂತರ್ಜಾಲ ತಾಣವನ್ನು ಸಂದರ್ಶಿಸಿ ತಿಳಿದುಕೊಳ್ಳಬಹುದು.
 
ಅಲ್ಲದೆ, ಇದು ‘ಆಧಾರ್’ಗೆ ಸಂಪರ್ಕ ಕಲ್ಪಿಸಲಿದೆ. ವಿಮಾ ಮೊತ್ತವನ್ನು ನೇರವಾಗಿ ‘ಆಧಾರ್’ಗೆ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಇದರಿಂದ ಅರ್ಹ ಫಲಾನುಭವಿಗೆ ನೇರವಾಗಿ ಹಾಗೂ ಖಚಿತವಾಗಿ ಹಣ ಪಾವತಿಯಾಗಲಿದೆ. ಈ ತಂತ್ರಾಂಶವು ‘ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ’ದ ಮಾಹಿತಿಯೊಂದಿಗೆ ಸಂಪರ್ಕ ಹೊಂದಿದೆ. ಹವಾಮಾನ ಮಾಹಿತಿಯನ್ನು ಪ್ರತಿದಿನದ ಆಧಾರದ ಮೇರೆಗೆ ಪಡೆದುಕೊಳ್ಳಲಿದೆ. ಈ ತಂತ್ರಾಂಶ ಬಿಡುಗಡೆ ಸಮಾರಂಭದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ಹಿರಿಯ ಅಧಿಕಾರಿಗಳೂ ಹಾಗೂ ರೈತರ ಪ್ರತಿನಿಧಿಗಳೂ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News