×
Ad

ಸಂಚಾರಿ ಮೀನು ಮಾರಾಟ ವಾಹನಕ್ಕೆ ಸಚಿವ ಮಧ್ವರಾಜ್‌ರಿಂದ ಚಾಲನೆ

Update: 2016-06-30 23:38 IST

ಬೆಂಗಳೂರು, ಜೂ.30: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೊಬೈಲ್ ಮತ್ಸದರ್ಶಿನಿ ಹಾಗೂ ಮೊಬೈಲ್ ಮೀನು ಮಾರಾಟ ವಾಹನಕ್ಕೆ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ಇದೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಈ ವಾಹನ ಬೆಂಗಳೂರು ಉತ್ತರದಲ್ಲಿ ಮಾರಾಟ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ನಗರದ ಇತರೆಡೆಯಲ್ಲೂ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಇದೊಂದು ವಿನೂತನ ಯೋಜನೆಯಾಗಿದೆ. ಈ ವಾಹನದಲ್ಲಿ ತಾಜಾ ಮೀನು ಇರಲಿದ್ದು, ನಗರದ ಪ್ರತೀ ಬಡಾವಣೆಗೂ ಹೋಗಲಿದೆ. ಬೆಂಗಳೂರಿಗೆ ಕನಿಷ್ಠ ಇಂತಹ 100 ವಾಹನಗಳ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ 100 ವಾಹನದಲ್ಲಿ ಮಾರಾಟ ಮಾಡುವಂತೆ ನಿಗಮ ಪ್ರಯತ್ನಿಸಬೇಕು ಎಂದು ಹೇಳಿದರು.
 ಜಗತ್ತಿನಲ್ಲಿ ಮೀನು ಅತ್ಯಂತ ಪೌಷ್ಟಿಕಾಂಶ ಇರುವ ಆಹಾರವಾಗಿದ್ದು, ಅತೀ ಬೇಡಿಕೆಯ ಪದಾರ್ಥವಾಗಿದೆ. ವಾಹನದ ಸಿಬ್ಬಂದಿ ಮೀನು ಶುಚಿಗೊಳಿಸಿ ನೀಡುತ್ತಾರೆ. ಬೆಲೆ ಕೂಡ ಕಡಿಮೆ ಇರುತ್ತದೆ ಎಂದು ಮಾಹಿತಿ ನೀಡಿದರು.
  ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ ಮಾತನಾಡಿ, ತಾಜಾ ಮೀನು ಮಾತ್ರ ಈ ವಾಹನದಲ್ಲಿ ಮಾರಾಟ ಮಾಡಲಾಗುತ್ತದೆ. 10ಕ್ಕೂ ಅಧಿಕ ವಿಧದ ಮೀನು ಇದರಲ್ಲಿರುತ್ತವೆ. 300 ಕೆ.ಜಿ.ಗೂ ಅಧಿಕ ಮೀನುಗಳನ್ನು ಶೇಖರಣೆ ಮಾಡುವ ವ್ಯವಸ್ಥೆಯನ್ನು ಈ ವಾಹನ ಹೊಂದಿದೆ ಎಂದು ತಿಳಿಸಿದರು.
ವಾಹನದ ವಿಶೇಷತೆಗಳು:  ಮೀನಿನ ಪ್ರದರ್ಶನ, ಮೀನು ಶೇಖರಣ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ಘನ ಮತ್ತು ದ್ರವ ತ್ಯಾಜ್ಯ ಶೇಖರಿಸುವ ವ್ಯವಸ್ಥೆ ಹೊಂದಿದೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗಲಿದೆ.
  ಮೊಬೈಲ್ ಮತ್ಸ್ಯದರ್ಶಿನಿಯಲ್ಲಿ ಗ್ರಾಹಕರಿಗೆ ಉತ್ತಮ ಪರಿಸರದಲ್ಲಿ ಮೀನು ಮತ್ತು ಮೀನಿನ ಮೌಲ್ಯ ವರ್ಧಿತ ಖಾದ್ಯಗಳನ್ನು ನೀಡಲಾಗುತ್ತದೆ. ಇದರಲ್ಲಿ ಮೀನನ್ನು ಸಂರಕ್ಷಿಸಲು ಇಡಲು ಬೇಕಾದ ಫೈಯರ್‌ಗಳು, ಓವರ್ ಹೆಡ್ ಟ್ಯಾಂಕ್, ತ್ಯಾಜ್ಯ ವಸ್ತು ಶೇಖರಣೆ, ಬ್ಯಾಟರಿ ಚಾಲಿತ ವ್ಯವಸ್ಥೆ ಇರುತ್ತದೆ.
 ಮೊಬೈಲ್ ಮೀನು ಮಾರಾಟ ವಾಹನದಲ್ಲಿ ತಾಜಾ ಮೀನನ್ನು ಶುದ್ಧೀಕರಿಸಿಕೊಡಲಾಗುತ್ತದೆ. ಇದರಲ್ಲಿ ಮೀನು ಸಂರಕ್ಷಿಸಿಡಲು ಬೇಕಾದ ಚಿಲ್ಲರ್, ನೀರಿನ ವ್ಯವಸ್ಥೆ, ಮೀನು ಶುಚಿಗೊಳಿಸಲು ಬೇಕಾದ ವ್ಯವಸ್ಥೆ ಇರುತ್ತದೆ. 12 ಲಕ್ಷ ರೂ.ವೆಚ್ಚದಲ್ಲಿ ಇದನ್ನು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News