ರಾಜ್ಯದ ಸರಕಾರಿ ಶಾಲೆಗಳ ಮಕ್ಕಳಿಗೆ ಯುವಬ್ರಿಗೇಡ್‌ನಿಂದ ಹಿಂದುತ್ವದ ಪಾಠ

Update: 2016-07-01 13:04 GMT

ಬೆಂಗಳೂರು/ಬೆಳಗಾವಿ, ಜು.1: ಸಂಘಪರಿವಾರವು ಯುವಬ್ರಿಗೇಡ್ ಹೆಸರಿನಡಿ ರಾಜ್ಯಾದ್ಯಂತ ಎಲ್ಲ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಸಾವರ್ಕರ್ ಜಯಂತಿ ಆಚರಣೆ ನೆಪದಲ್ಲಿ ಮುಗ್ದ ಮಕ್ಕಳಲ್ಲಿ ಮನುಸ್ಮತಿಯ ಸಂಸ್ಕೃತಿ ಮತ್ತು ಕೋಮುವಾದವನ್ನು ಬಿತ್ತುತ್ತಿರುವ ಘಟನೆಗಳು ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಬೆಳಕಿಗೆ ಬಂದಿವೆ.

ವೀರ ಸಾವರ್ಕರ್ ಜಯಂತಿ ಹೆಸರಲ್ಲಿ ಸಂಘ ಪರಿವಾರದ ಕಾರ್ಯಕರ್ತರು ರಾಜ್ಯದ ಸರಕಾರಿ ಶಾಲೆಗಳಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕೈಗೊಳ್ಳುತ್ತಿದ್ದು, ಆರೆಸ್ಸೆಸ್ ಮುಖಂಡ ವೀರೇಶ್ ಕುಂಬಾರ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆನ್ನಲಾಗಿದ್ದು, ವಿದ್ಯಾರ್ಥಿಗಳಲ್ಲಿ ಹಿಂದುತ್ವ, ಕೇಸರೀಕರಣ ಸಿದ್ಧಾಂತಗಳನ್ನು ಹರಡಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ. ಶಾಲೆಗಳಲ್ಲಿ ಕೇಸರಿ ಭಗವಾಧ್ವಜ, ಆರೆಸ್ಸೆಸ್ ಮನಸ್ಥಿತಿಯ ಭಾರತಮಾತೆಯ ಚಿತ್ರ ಹಾಗೂ ಇನ್ನಿತರ ಆರೆಸ್ಸೆಸ್ ಸಂಕೇತಗಳನ್ನು ವಿದ್ಯಾರ್ಥಿಗಳ ತಲೆಗೆ ತುರುಕಲಾಗುತ್ತದೆ. ಶಿಕ್ಷಣ ಇಲಾಖೆ ಈ ಕುರಿತಂತೆ ವೌನ ತಾಳಿದೆ ಎನ್ನಲಾಗಿದೆ.

ಸಾವರ್ಕರ್ ಜೀವನ ಚರಿತ್ರೆಯನ್ನು ಆರೆಸ್ಸೆಸ್ ಮನಸ್ಥಿತಿಯನ್ನು ಸೇರಿಸಿ ವೀಡಿಯೊ ತುಣುಕುಗಳಲ್ಲಿ ಮಕ್ಕಳಿಗೆ ತೋರಿಸಲಾಗುತ್ತಿದೆ. ಆರೆಸ್ಸೆಸ್ ಮುಖಂಡ ವಿರೇಶ್ ಕುಂಬಾರ ಮಕ್ಕಳಿಗೆ ಸಾವರ್ಕರ್ ಜೀವನಚರಿತ್ರೆಯನ್ನು ಕಥೆಯ ರೂಪದಲ್ಲಿ ಹೇಳಿ ಅದರಲ್ಲಿ ಆರೆಸ್ಸೆಸ್ ತತ್ವವನ್ನು ತೋರಿಸಿ ಮುಗ್ಧ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಮಕ್ಕಳಲ್ಲಿ ದೇಶಪ್ರೇಮವೆಂದರೆ ಭಾರತ್ ಮಾತಾಕಿ ಜೈ ಎಂದು ಹೇಳಬೇಕು ಎಂಬಂತೆ ಇದುವರೆಗೆ ಆರೆಸ್ಸೆಸ್ ಬೈಟಕ್‌ಗಳಿಗೆ ಕಡ್ಡಾಯವಾಗಿದ್ದ ಘೋಷಣೆಯನ್ನು ಮಕ್ಕಳಲ್ಲಿ ಹರಡುತ್ತಿದ್ದು, ಗಾಂಧೀಜಿ, ಅಂಬೇಡ್ಕರ್ ಕುರಿತಂತೆ ತಪ್ಪು ಮಾಹಿತಿಗಳನ್ನೂ ಹರಡುತ್ತಿದ್ದಾರೆ ಎಂದು ಜನರು ದೂರಿದ್ದಾರೆ.

ಇದುವರೆಗೆ ಯುಬ್ರಿಗೇಡ್ ನೇತೃತ್ವದಲ್ಲಿ ಬೆಳಗಾವಿಯ ಕೆ.ಎಲ್.ಇ. ಸಿಬಿಎಸ್ಸಿ ಶಾಲೆ, ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ರಾಧಾಕೃಷ್ಣ ಶಾಲೆ, ಜಿಎನ್.ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಮ್ಮಿಗನೂರು ವಿನಾಯಕ ವಿದ್ಯಾ ನಿಕೇತನ ಶಾಲೆ, ಮೋಕ್ಷಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ತೊರಂಗಲ್ಲು ಸೇರಿದಂತೆ ರಾಜ್ಯಾದ್ಯಂತ ವಿವಿಧ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸಾವರ್ಕರ್ ಜಯಂತಿ ಹೆಸರಲ್ಲಿ ಆರೆಸ್ಸೆಸ್ ತಮ್ಮ ಅಜೆಂಡಾವನ್ನು ಬಿತ್ತಿವೆ. ಈ ಕುರಿತಂತೆ ಸರಕಾರ ಮತ್ತು ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News