×
Ad

ಚುನಾವಣೆ ಟಿಕೆಟ್: ಸರ್ವೇ ಮೂಲಕ ಬಿಜೆಪಿ ಅಭ್ಯರ್ಥಿಗಳ ಆಯ್ಕೆ

Update: 2016-07-01 22:58 IST

ಶಿವಮೊಗ್ಗ, ಜು.1: ಮುಂದಿನ ವಿಧಾನಸಭೆೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಸರ್ವೇ ನಡೆಸಲಾಗುವುದು. ಸರ್ವೇಯಲ್ಲಿ ವ್ಯಕ್ತವಾಗುವ ಅಭಿಪ್ರಾಯದಂತೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಹೊಸ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಭಿನ್ನಮತೀಯ ಚಟುವಟಿಕೆ ನಡೆಸುತ್ತಿರುವ ಸ್ವಪಕ್ಷೀಯ ನಾಯಕರಿಗೆ ಬಿಎಸ್‌ವೈರವರು ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಭಿನ್ನಮತೀಯ ಚಟುವಟಿಕೆ ಮುಂದುವರಿಸಿದರೆ ಮುಂಬರುವ ವಿಧಾನಸಭೆೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಂದೇಶ ರವಾನಿಸಿದ್ದಾರೆ. ಶುಕ್ರವಾರ ನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ನಡೆದ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ಪದಾಧಿಕಾರಿಗಳ ಪಟ್ಟಿ ಪ್ರಕಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ವೇ ನಡೆಸುತ್ತೇನೆ: ವಿಧಾನಸಭೆೆ ಚುನಾವಣೆಗೆ ಇನ್ನು ಎರಡು ವರ್ಷವಿದ್ದರೂ ಕೊನೆಯ ಆರು ತಿಂಗಳು ಚುನಾವಣೆಯ ತಿಂಗಳಾಗಿದೆ. ಇದರಿಂದ ಚುನಾವಣೆಗೆ ಇನ್ನೂ ಕೇವಲ ಒಂದೂವರೆ ವರ್ಷ ಮಾತ್ರ ಬಾಕಿಯಿದೆ. 224 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲಾಗುವುದು. 150ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುವುದು ಎಂದರು. ಎಲ್ಲ ಕ್ಷೇತ್ರಗಳಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಗೆಲ್ಲುವ, ಜನಪ್ರಿಯ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಚುನಾವಣೆಗೂ ಪೂರ್ವದಲ್ಲಿಯೇ ಎಲ್ಲ ಕ್ಷೇತ್ರಗಳಲ್ಲಿಯೂ ಸರ್ವೇ ನಡೆಸಲಾಗುವುದು. ಸರ್ವೇಯಲ್ಲಿ ವ್ಯಕ್ತವಾಗುವ ಅಭಿಪ್ರಾಯ ಗಮನಿಸಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧರಿಸಲಾಗುವುದು. ಸಮಾವೇಶ:

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದ್ದೇನೆ. ವಾರದಲ್ಲಿ ಮೂರು ದಿನ ಪಕ್ಷದ ಕಚೇರಿಯಲ್ಲಿರುತೇನೆ. ಉಳಿದ ನಾಲ್ಕು ದಿನಗಳ ಕಾಲ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡುವ ಕಾರ್ಯ ಮಾಡುತ್ತಿದ್ದೇನೆ. ಮಳೆಗಾಲ ಪೂರ್ಣಗೊಂಡ ನಂತರ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದು ಎಂದರು. ಸಮಾರಂಭದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಶಾಸಕ ಬಿ.ವೈ.ರಾಘವೇಂದ್ರ, ನೂತನ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ನಿಕಟಪೂರ್ವ ಅಧ್ಯಕ್ಷ ಎಸ್.ದತ್ತಾತ್ರಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕೆ.ಜಿ.ಕುಮಾರಸ್ವಾಮಿ ಸೇರಿದಂತೆ ಮಾಜಿ ಶಾಸಕರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News