ಮುದ್ದೇಬಿಹಾಳ: ಚನ್ನವೀರ ಮಠಾಧೀಶರಿಂದ ಇಫ್ತಾರ್ ಕೂಟ
ಮುದ್ದೇಬಿಹಾಳ, ಜು.1: ತಾಲೂಕಿನ ಕುಂಟೋಜಿ ಗ್ರಾಮದಲ್ಲಿರುವ ಚನ್ನವೀರ ದೇವರ ಸಂಸ್ಥಾನ ಹಿರೇಮಠದಲ್ಲಿ ರಮಝಾನ್ ತಿಂಗಳ ಉಪವಾಸ ನಿಮಿತ್ತ
ಮುಸ್ಲಿಂ ಬಾಂಧವರಿಗೆ ಇಫ್ತಾರ್ ಏರ್ಪಡಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರುವ ಅಪರೂಪದ ಕಾರ್ಯವನ್ನು ಚೆನ್ನವೀರ ಮಠಾಧೀಶ ಚನ್ನವೀರ ದೇವರು ಮಾಡಿ ತೋರಿಸಿದ್ದಾರೆ.
ಗುರುವಾರ ಸಂಜೆ ಮುದ್ದೇಬಿಹಾಳ, ತಾಳಿಕೋಟೆ ಪಟ್ಟಣ ಸೇರಿದಂತೆ ಸ್ಥಳಿಯ ಮತ್ತು ಅಕ್ಕಪಕ್ಕದ ಮುಸ್ಲಿಮ್ ಬಾಂಧವರನ್ನು ಕರೆಸಿ ಹಿಂದು ಸಂಪ್ರದಾಯದಂತೆ ಸಸ್ಯಾಹಾರದ ಊಟ ಉಣಬಡಿಸಿದ್ದು ಮಾತ್ರವಲ್ಲದೆ, ಅವರೊಂದಿಗೆ ಸಹಪಂಕ್ತಿಯಲ್ಲಿ ಕುಳಿತು ತಾವೂ ಭೋಜನ ಸ್ವೀಕರಿಸಿ ಕೋಮುಸಮನ್ವಯತೆಯ ಸಂದೇಶ ಸಾರಿದರು.
ಇಫ್ತಾರ್ ಕೂಟಕ್ಕೂ ಮುನ್ನ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ಎಲ್ಲರೂ ಸಹಬಾಳ್ವೆ ನಡೆಸಿದರೆ ಮಾತ್ರ ಶಾಂತಿ, ನೆಮ್ಮದಿ ನೆಲೆ ನಿಲ್ಲುತ್ತದೆ. ಎಲ್ಲ ಧರ್ಮಗಳ ಬೋಧನೆ ಶಾಂತಿ ಪಾಲಿಸುವಿಕೆಯಾಗಿದೆ. ಎಲ್ಲ ಧರ್ಮಗ್ರಂಥಗಳು ಮನುಷ್ಯತ್ವದ ಮಹತ್ವ ಸಾರುತ್ತವೆ. ಅದನ್ನು ನಾವೆಲ್ಲ ಪಾಲಿಸಬೇಕು ಎಂದರು.
ತಾಳಿಕೋಟೆ ಮುಸ್ಲಿಮ್ ಸಮುದಾಯದ ಮುಖಂಡ ಅಬ್ದುಲ್‌ಗಣಿ ಮಕಾನದಾರ ಮಾತನಾಡಿ, ಇಸ್ಲಾಂ ಧರ್ಮ ಶಾಂತಿ ಬೋಧಿಸುತ್ತದೆ. ಅಹಿಂಸೆಗೆ ಪ್ರಚೋದನೆ ನೀಡುವುದು ಇಸ್ಲಾಂ ಧರ್ಮವಲ್ಲ. ಎಲ್ಲ ಧರ್ಮಗಳೂ ಮಾನವೀಯತೆಯನ್ನು ತಿಳಿಸಿಕೊಡುತ್ತವೆ. ಮಠಾಧೀಶರು ಸಮಾನತೆ, ಮಾನವೀಯತೆಯ ಮಹತ್ವ ಅರಿತಿರುತ್ತಾರೆ. ಅವರಿಗೆ ಧರ್ಮ, ಜಾತಿ ಬೇಧ ಇರುವುದಿಲ್ಲ ಎಂದರು ಹೇಳಿದರು.
ಇಫ್ತಾರ್ ಕೂಟದಲ್ಲಿ ಪ್ರಮುಖರಾದ ಅಲ್ಲಾಭಕ್ಷ ನಮಾಜಕಟ್ಟಿ, ಕರೀಂಸಾಬ ನಾಲತವಾಡ, ಖಾಜಾಹುಸೇನ ಮುಲ್ಲಾ, ಶಬ್ಬೀರ ನಮಾಜಕಟ್ಟಿ, ಮೈರುದ್ದೀನ್, ಬಿ.ಎಚ್.ವಠಾರ, ನಯೀಮ್ ಪಾಶಾ ಇನಾಮದಾರ, ಸಂಗನಗೌಡ ಪಾಟೀಲ, ಶರಣಪ್ಪ ಹೆಬ್ಬಾಳ, ಶಿವಲಿಂಗಪ್ಪ ಗಸ್ತಿಗಾರ, ಮಲ್ಲನಗೌಡ ಬಿರಾದಾರ, ಶ್ರೀಶೈಲ ಸಜ್ಜನ, ಬಿ.ಪಿ.ಬಿರಾದಾರ, ಭೀಮನಗೌಡ ಬಿರಾದಾರ, ಕರಿಸಿದ್ದಗೌಡ ಬಿರಾದಾರ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.