×
Ad

ಮೋರ್ ಸೂಪರ್ ಮಾರ್ಕೆಟ್‌ಗೆ ನೋಟಿಸ್: ಯು.ಟಿ.ಖಾದರ್

Update: 2016-07-02 22:56 IST

ಬೆಂಗಳೂರು, ಜು.2: ತೊಗರಿಬೇಳೆಯನ್ನು ಅತೀ ಹೆಚ್ಚು ಬೆಲೆ ನಿಗದಿಗೊಳಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವ ಕುರಿತು ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಮೋರ್ ಸೂಪರ್‌ಮಾರ್ಕೆಟ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಆಹಾರ ಇಲಾಖೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ತೊಗರಿಬೇಳೆ ಸಗಟು ವ್ಯಾಪಾರಿಗಳ ಸಂಘ ಹಾಗೂ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೋರ್ ಸೂಪರ್ ಮಾರ್ಕೆಟ್‌ಗೆ ತೊಗರಿಬೇಳೆಯು ಪ್ರತಿ ಕೆಜಿಗೆ 130-145 ರೂ.ಗಳಿಗೆ ಲಭ್ಯವಾಗುತ್ತದೆ. ಆದರೆ, ಒಂದು ಕೆಜಿಗೆ 315 ರೂ.ದರ ನಿಗದಿ ಮಾಡಿ, ರಮಝಾನ್ ಹಿನ್ನೆಲೆಯಲ್ಲಿ ರಿಯಾಯಿತಿ ದರ 190 ರೂ.ಎಂದು ಗ್ರಾಹಕರನ್ನು ವಂಚಿಸುತ್ತಿರುವ ಕುರಿತು ದೂರುಗಳು ಬಂದಿದ್ದವು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೂಲಕ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು. ಜು.8ರಿಂದ ರಾಜ್ಯದ ಎಲ್ಲ 144 ಎಪಿಎಂಸಿಗಳಲ್ಲಿ ಅತ್ಯುತ್ತಮ ಗುಣಮಟ್ಟ(ಗ್ರೇಡ್-1)ದ ತೊಗರಿಬೇಳೆಯನ್ನು ಪ್ರತಿ ಕೆಜಿಗೆ 145 ರೂ. ಹಾಗೂ ಉತ್ತಮ ಗುಣಮಟ್ಟ(ಗ್ರೇಡ್-2)ದ ತೊಗರಿಬೇಳೆಯನ್ನು 130 ರೂ.ಗಳಿಗೆ ನಿಗದಿಗೊಳಿಸಿ ಗ್ರಾಹಕರಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಖಾದರ್ ತಿಳಿಸಿದರು.
ಮಾರುಕಟ್ಟೆಯಲ್ಲಿ ತೊಗರಿಬೇಳೆ ದರ ನಿಯಂತ್ರಣಕ್ಕೆ ಬರುವವರೆಗೆ ಅಥವಾ ಮುಂದಿನ ಮೂರು ತಿಂಗಳ ಕಾಲ ಈ ದರ ಅನ್ವಯವಾಗಲಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಜು.8ರಂದು ಬೆಳಗ್ಗೆ 9 ಗಂಟೆಗೆ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಎಪಿಎಂಸಿಗಳಲ್ಲಿ ಕನಿಷ್ಠ 2 ಕೆಜಿಯಂತೆ ತೊಗರಿಬೇಳೆ ಮಾರಾಟ ಮಾಡಲಾಗುವುದು. ಸಗಟು ವ್ಯಾಪಾರಿಗಳು, ರಿಟೇಲ್ ವ್ಯಾಪಾರಿಗಳು ಹಾಗೂ ಗ್ರಾಹಕರು ಸೇರಿದಂತೆ ಯಾರು ಬೇಕಾದರೂ ಅದನ್ನು ಖರೀದಿ ಮಾಡಬಹುದಾಗಿದೆ. ರಿಟೇಲ್ ವ್ಯಾಪಾರಿಗಳು ಎಪಿಎಂಸಿ ದರಕ್ಕಿಂತ 15-18 ರೂ.ಗಳವರೆಗೆ ಹೆಚ್ಚುವರಿ ಬೆಲೆ ನಿಗದಿಗೊಳಿಸಿ ಮಾರಾಟ ಮಾಡಬಹುದಾಗಿದೆ ಎಂದು ಖಾದರ್ ತಿಳಿಸಿದರು.
ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳು ಕಂಡು ಬಂದಲ್ಲಿ ಅದಾನಿ, ರಿಲಯನ್ಸ್, ಸಿಂಗಾಪುರ ಮಾರುಕಟ್ಟೆ ಸೇರಿದಂತೆ ಎಲ್ಲ ಬಹುರಾಷ್ಟ್ರೀಯ ಮಾರುಕಟ್ಟೆಗಳಿಗೂ ಮೋರ್ ಮಾದರಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರುಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News