×
Ad

ಅಂಬೇಡ್ಕರ್ ನೆನಪಿನ ಪ್ರಿಂಟಿಂಗ್ ಪ್ರೆಸ್ ಧ್ವಂಸ ಖಂಡಿಸಿ ಪ್ರತಿಭಟನೆ

Update: 2016-07-02 22:58 IST

ಬೆಂಗಳೂರು, ಜು.2: ಮುಂಬೈನ ದಾದರ್‌ನಲ್ಲಿರುವ ಅಂಬೇಡ್ಕರ್ ನೆನಪಿನ ಬುದ್ಧಭೂಷಣ ಪ್ರಿಂಟಿಂಗ್ ಪ್ರೆಸ್‌ನ್ನು ಕೋಮುವಾದಿಗಳು ಧ್ವಂಸ ಮಾಡಿರುವುದನ್ನು ಖಂಡಿಸಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ನಗರದ ಟೌನ್‌ಹಾಲ್ ಮುಂಭಾಗ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ್ದಾರೆ.
 ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಎನ್.ಎ.ಹಾರೀಸ್ ಮಾತನಾಡಿ, ದೇಶದಲ್ಲಿ ಕೆಲವು ಕೋಮುವಾದಿ ಸಂಘಟನೆಗಳು ಅಂಬೇಡ್ಕರ್ ಆಶಯ ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವಾಗಿ ಇಂದಿಲ್ಲಿ ಅವರು ನಿರ್ಮಾಣ ಮಾಡಿದ್ದ ಕಟ್ಟಡವನ್ನು ಧ್ವಂಸ ಮಾಡಿದ್ದಾರೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು, ದಲಿತರು ಹಾಗೂ ಮುಸ್ಲಿಂರ ಮನೋಭಾವಗಳಿಗೆ ಧಕ್ಕೆ ಬರುವ ಕೃತ್ಯಗಳು ನಡೆಯುತ್ತಲೇ ಇವೆ. ಹೀಗಾಗಿ ದಲಿತರು ಹಾಗೂ ಮುಸ್ಲಿಂರು ಒಂದಾಗಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಅವರು ಸ್ಥಾಪನೆ ಮಾಡಿರುವ ಗ್ರಂಥಾಲಯ ಹಾಗೂ ಪತ್ರಿಕೆಯ ಕಚೇರಿ ಧ್ವಂಸಗೊಳಿಸಿರುವುದು ಬೇಸರದ ವಿಷಯ. ದೇಶದಲ್ಲಿ ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಅದನ್ನು ಉಳಿಸಿಕೊಳ್ಳುವ ಕಡೆ ನಾವೆಲ್ಲಾ ಸಾಗಬೇಕಿದೆ ಎಂದು ಹೇಳಿದರು. ನಂತರ ಮಾತನಾಡಿದ ರಿಪಬ್ಲಿಕನ್ ಸೇನೆಯ ಅಧ್ಯಕ್ಷ ಜಿಗಣಿ ಶಂಕರ್, ಅಲ್ಲಿನ ಆರೆಸ್ಸೆಸ್‌ನ ಮುಖಂಡ ರತ್ನಾಕರ್ ಗಾಯಕ್‌ವಾಡ್ ಧ್ವಂಸ ಮಾಡುವುದರಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಇವರ ವಿರುದ್ಧ ಅಂಬೇಡ್ಕರ್ ಸಂಬಂಧಿಕರು ದೂರು ದಾಖಲಿಸಿದ್ದರೂ, ಪೊಲೀಸರು ಅವರನ್ನು ಬಂಧಿಸಲು ಮುಂದಾಗಿಲ್ಲ. ಹಾಗಾದರೆ ಇದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದ ಅವರು, ಇದರ ಹಿಂದೆ ಮುಖ್ಯಮಂತ್ರಿಯ ಕೈವಾಡ ಇದೆ ಎಂದು ಆಪಾದಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆ, ದಲಿತ ಸಂಘರ್ಷ ಸಮಿತಿ (ಕೆ), ದಲಿತ ಸಂರಕ್ಷಣಾ ಸಮಿತಿ, ಪ್ರಜಾವಿಮೋಚನಾ ಚಳವಳಿ, ಕರ್ನಾಟಕ ಜನಾಂದೋಲನ ಸಂಘಟನೆ, ಭಾರತೀಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News