×
Ad

ಬೇಡಿಕೆಗಳ ಈಡೇರಿಕೆಗೆ ಛಾಯಾಗ್ರಾಹಕರ ಒತ್ತಾಯ

Update: 2016-07-02 23:11 IST

ಮಡಿಕೇರಿ, ಜು.2: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜಿಲ್ಲೆಯಾದ್ಯಂತ ಸ್ಟುಡಿಯೋ ಬಂದ್ ಮಾಡಿ ಪ್ರತಿಭಟನೆ ನಡೆಸಿತು.

ನಗರದ ಬಾಲಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಛಾಯಾಗ್ರಾಹಕರು ವೃತ್ತಿಪರ ಛಾಯಾಗ್ರಾಹಕರಿಗೆ ಜೀವವಿಮೆ, ಆರೋಗ್ಯ ವಿಮೆ, ಇಎಸ್‌ಐ, ಯಶಸ್ವಿನಿ, ಬಿಪಿಎಲ್ ಕಾರ್ಡ್ ಹಾಗೂ ಪಿಂಚಣಿ ಯೋಜನೆಯಡಿ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಸುಮಾರು 150 ಸ್ಟುಡಿಯೋಗಳಿದ್ದು, 450ಕ್ಕೂ ಹೆಚ್ಚು ಛಾಯಾಗ್ರಾಹಕರು ಸಂಘದ ಸದಸ್ಯರಾಗಿದ್ದಾರೆ. ರಾಜ್ಯಾದ್ಯಂತ ಅದೆಷ್ಟೋ ಕುಟುಂಬಗಳು ಛಾಯಾಗ್ರಹಣವನ್ನು ಆಧಾರವಾಗಿಸಿಕೊಂಡು ಬದುಕುನಡೆಸುತ್ತಿವೆ. ಸರಕಾರಗಳು ಅಗತ್ಯ ನೆರವನ್ನು ನೀಡದೆ ವೃತ್ತಿಪರ ಛಾಯಾಗ್ರಾಹಕರನ್ನು ನಿರ್ಲಕ್ಷಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಟುಡಿಯೋದಲ್ಲಿ ತೆಗೆದ ಪಾಸ್ ಪೋರ್ಟ್ ಫೋಟೊಗಳನ್ನೇ ಸರಕಾರಿ ಕೆಲಸ ಕಾರ್ಯಗಳಿಗೆ ಬಳಸುವಂತಾಗಬೇಕು. ಛಾಯಾಗ್ರಾಹಕರನ್ನು ಉಳಿಸಿ ಬೆಳೆಸಲು ಪ್ರತ್ಯೇಕ ಅಕಾಡಮಿ ಸ್ಥಾಪನೆಯಾಗಬೇಕು ಹಾಗೂ ನುರಿತ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿ ಪುರಸ್ಕಾರವನ್ನು ನೀಡಬೇಕು, ಪ್ರತೀ ಜಿಲ್ಲೆಯಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮ ಹಾಗೂ ಜಿಲ್ಲಾ ಉತ್ಸವಗಳ ಛಾಯಾಗ್ರಹಣದ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ವೃತ್ತಿಪರ ಛಾಯಾಗ್ರಾಹಕರಿಗೆ ನೀಡಬೆೇಕು, ಪ್ರತೀ ಚುನಾವಣೆ ಸಂದರ್ಭ ಛಾಯಾಗ್ರಹಣದ ಅವಕಾಶವನ್ನು ವೃತ್ತಿಪರ ಛಾಯಾಗ್ರಾಹಕರಿಗೆ ಒದಗಿಸಬೇಕು, ಸರಕಾರಿ ವ್ಯಾಟ್ ಕಾಯ್ದೆಯ ಪ್ರಕಾರ ಛಾಯಾಗ್ರಹಣದ ಹಳೆ ಬಾಕಿಯೆಂದು 2004-05ರಿಂದ ಕಟ್ಟಲು ಹೇಳಿರುವ ಕಂದಾಯವನ್ನೆಲ್ಲ ಮನ್ನಾ ಮಾಡಿ 2015 ರಿಂದೀಚೆಗೆ ಕಟ್ಟಲು ಆದೇಶ ನೀಡಬೇಕು, ಛಾಯಾಗ್ರಾಹಕರಿಗೆ ಪ್ರತ್ಯೇಕ ಕಲ್ಯಾಣ ನಿಧಿಯನ್ನು ಸರಕಾರ ಸ್ಥಾಪಿಸಬೇಕು, ರಾಜ್ಯದ ಎಲ್ಲ ಛಾಯಾಗ್ರಾಹಕರ ಮಕ್ಕಳಿಗೆ ಆರ್‌ಟಿಇ ಮೂಲಕ ವಿದ್ಯಾಭ್ಯಾಸ ದೊರಕುವಂತೆ ಮಾಡಬೆೇಕು ಮತ್ತು ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು, ಸರಕಾರಿ ವೃತ್ತಿಯಲ್ಲಿದ್ದು ಛಾಯಾಗ್ರಹಣ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಗೊಳಿಸಬೇಕು. ಪ್ರತಿ ಜಿಲ್ಲೆಗೊಂದು ಛಾಯಾ ಭವನ ನಿರ್ಮಿಸಲು ಸರಕಾರದಿಂದ ನಿವೇಶನ ಹಾಗೂ ಆರ್ಥಿಕ ನೆರವು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಡ್ಯಾಡು ಜೋಸೆಫ್, ಕಾರ್ಯದರ್ಶಿ ಕೆ.ಬಿ.ಸುನೀಲ್, ಸಹ ಕಾರ್ಯದರ್ಶಿ ದೀಪು, ಉಪಾಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್, ನಿರ್ದೇಶಕರಾದ ಸುರೇಶ್, ವಿಜಯಕುಮಾರ್, ಮಡಿಕೇರಿ ಅಧ್ಯಕ್ಷ ಪಿ.ಎ.ಲೂಯಿಸ್, ಕಾರ್ಯದರ್ಶಿ ಕೆ.ಆರ್.ಸಂತೋಷ್, ಸೋಮವಾರಪೇಟೆ ಅಧ್ಯಕ್ಷ ಸುಬ್ರಮಣಿ, ಕುಶಾಲನಗರ ಅಧ್ಯಕ್ಷ ಪ್ರಶಾಂತ್ ಮತ್ತಿತರ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News