ಶಿವಮೊಗ್ಗ: ಮುಂಗಾರು ಮಳೆ ಚುರುಕು
ಶಿವಮೊಗ್ಗ, ಜು.2: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಮುಂಗಾರುಮಳೆ ಮತ್ತೆ ಚುರುಕುಗೊಂಡಿದ್ದು, ಧಾರಾಕಾರ ವರ್ಷಧಾರೆಯಾಗುತ್ತಿದೆ. ಉಳಿದಂತೆ ಜಿಲ್ಲೆಯ ಇತರ ತಾಲೂಕುಗಳಲ್ಲಿ ವರ್ಷಧಾರೆಯ ಅಬ್ಬರ ಕಡಿಮೆಯಾಗಿದ್ದು, ಸಾಧಾರಣ ಮಳೆಯಾಗುತ್ತಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿ ಅಂಶದ ಪ್ರಕಾರ, ಶನಿವಾರ ಬೆಳಗ್ಗೆ 8:30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ಒಟ್ಟಾರೆ ಸರಾಸರಿಯ ಪ್ರಮಾಣ 34.09 ಮಿ. ಮೀಟರ್ ಮಳೆಯಾಗಿದೆ. ಹೊಸನಗರ ತಾಲೂಕಿನಲ್ಲಿ ಅತ್ಯಧಿಕ 157.20 ಮಿ.ಮೀ. ಮಳೆಯಾಗಿದೆ. ಹೆಚ್ಚಳ: ಜಲಾನಯನ ಪ್ರದೇಶವಾದ ಹೊಸನಗರ ತಾಲೂಕು ಸುತ್ತಮುತ್ತಲು ಮತ್ತೆ ಧಾರಾಕಾರ ವರ್ಷಧಾರೆಯಾಗುತ್ತಿರುವುದರಿಂದ ಶರಾವತಿ ನದಿಯ ಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಇದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಶನಿವಾರದ ಮಾಹಿತಿಯ ಪ್ರಕಾರ 20,976 ಕ್ಯೂಸೆಕ್ಸ್ ಒಳಹರಿವಿದ್ದು, ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ 53.40 ಮಿ.ಮೀ. ವರ್ಷಧಾರೆಯಾಗಿದೆ. 1,763.55 (ಗರಿಷ್ಠ ಮಟ್ಟ: 1,819) ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1,770.30 ಅಡಿ ನೀರು ಸಂಗ್ರಹವಾಗಿತ್ತು. ಭದ್ರಾ ಜಲಾಶಯದ ಒಳಹರಿ ವಿನಲ್ಲಿ ಯಥಾಸ್ಥಿತಿಯಿದ್ದು 16,212 ಕ್ಯೂಸೆಕ್ ಇದೆ. 98 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 26.60 ಮಿ.ಮೀ. ಮಳೆಯಾಗಿದೆ. ಜಲಾಶಯದಲ್ಲಿ 123.11 (ಗರಿಷ್ಠ ಮಟ್ಟ : 186) ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು 152.60 ಅಡಿ ನೀರು ಸಂಗ್ರಹವಾಗಿತ್ತು. ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಪ್ರಸ್ತುತ ಜಲಾಶಯಕ್ಕೆ 19,235 ಕ್ಯೂಸೆಕ್ಸ್ ಒಳಹರಿವಿದ್ದು, 19,200 ಕ್ಯೂಸೆಕ್ಸ್ ನೀರನ್ನು ಹೊಸಪೇಟೆಯ ಟಿ.ಬಿ.ಡ್ಯಾಂಗೆ ಹೊರಬಿಡಲಾಗುತ್ತಿದೆ. ಮಾಣಿ ಜಲಾಶಯದ ನೀರಿನ ಮಟ್ಟ 575.28 (ಗರಿಷ್ಠ ಮಟ್ಟ : 594.36) ಮೀಟರ್ ಇದೆ. 2,543 ಕ್ಯೂಸೆಕ್ಸ್ ಒಳಹರಿವಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ.