‘ಅರಣ್ಯವನ್ನು ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ’
ಸೊರಬ,ಜು.2: ಕಾಡನ್ನು ನಾಶ ಮಾಡಲು ಮಾನವನೇ ಕಾರಣವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಮಧುಬಂಗಾರಪ್ಪ ಕರೆ ನೀಡಿದ್ದಾರೆ.
ಶನಿವಾರ ಪಟ್ಟಣದ ರುದ್ರಭೂಮಿಯಲ್ಲಿ ಅರಣ್ಯ ಇಲಾಖೆ, ಪಪಂ, ತಾಲೂಕಿನ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೋಟಿವೃಕ್ಷ ಆಂದೋಲನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ ಬದುಕಿಗಾಗಿ ಅರಣ್ಯ ಭೂಮಿಯನ್ನು ನಾಶ ಮಾಡಿದ್ದು, ಮತ್ತೊಮ್ಮೆ ಇದೇ ರೀತಿ ತಪ್ಪಾಗದಂತೆ ನೋಡಿಕೊಳ್ಳಬೇಕು. ಮನುಷ್ಯ ಬದುಕಲು ಮಾನವೀಯತೆ ಆಧಾರದ ಮೇಲೆ ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಅವಕಾಶ ನೀಡಲಾಗಿದೆ. ವಿನಾಕಾರಣ ಅರಣ್ಯ ನಾಶ ತಪ್ಪಿಸಬೇಕು. ದಿನದಿಂದ ದಿನಕ್ಕೆ ಏರುತ್ತಿರುವ ವಿಪರೀತ ತಾಪಮಾನದಿಂದಾಗಿ ಜಗತ್ತಿನ ಎಲ್ಲಾ ದೇಶಗಳು ಆತಂಕದಲ್ಲಿವೆ. ಪರಿಸರ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವನ್ಯ ಜೀವಿಗಳು ಕಾಡನ್ನೇ ಅವಲಂಬಿಸಿದ್ದು, ಅವುಗಳ ಮೂಕ ವೇದನೆ ಮಾನವರಿಗೆ ಅರ್ಥವಾಗುತ್ತಿಲ್ಲ. ಅವುಗಳ ರಕ್ಷಣೆಯೂ ಸಹ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದ್ದು, ಈ ದೃಷ್ಟಿಯಿಂದ ಕಾಡನ್ನು ಉಳಿಸಿ, ಬೆಳೆಸಲು ಇಲಾಖೆಯೊಂದಿಗೆ ಸದಾ ಇರುತ್ತೇನೆ ಎಂದು ಆಶ್ವಾಸನೆ ನೀಡಿದ ಅವರು , ಸಂಘ ಸಂಸ್ಥೆಗಳು ಪರಿಸರ ದಿನದಂದು ಮಾತ್ರ ಶ್ರಮಿಸದೆ ವರ್ಷಪೂರ್ತಿ ಗಿಡಗಳ ಸಂರಕ್ಷಣೆ ಜೊತೆಗೆ ಸಸಿಗಳನ್ನು ಹೆಚ್ಚು ಹೆಚ್ಚು ನೆಡುವುದರ ಮೂಲಕ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು. ಎಸಿಎಫ್ ಶ್ರೀನಿವಾಸ ಯರಡೋಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಂಪಂ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ ಹಾಗೂ ಸದಸ್ಯರು, ಆರ್‌ಎಫ್‌ಒ ಅಜಯ ಕುಮಾರ್, ತಾಪಂ ಇಒ ಎಸ್.ಎಂ.ಡಿ.ಇಸ್ಮಾಯೀಲ್, ತೋಟಗಾರಿಕೆ ಇಲಾಖೆಯ ಸೋಮಶೇಖರ್, ಕೃಷಿ ಅಧಿಕಾರಿ ಮಂಜುಳಾ, ಡಾ:ಜ್ಞ್ಞಾನೇಶ್ ಮತ್ತಿತರರು ಉಪಸ್ಥಿತರಿದ್ದರು.