ಮಾರುಕಟ್ಟೆಗೆ ಒಂದೇ ದಿನ 80 ಟನ್ ಮಾವು ಪೂರೈಸಿ ದಾಖಲೆ ನಿರ್ಮಿಸಿದ ರೈತ
ಶ್ರೀನಿವಾಸಪುರ, ಜು.3: ಮಾವಿಗೆ ದೇಶದಲ್ಲೇ ಪ್ರಸಿದ್ದಿ ಪಡೆದಿರುವ ಶ್ರೀನಿವಾಸಪುರ ತಾಲೂಕಿನಲ್ಲಿ ರೈತರೋರ್ವರು ತಾವು ಬೆಳೆದ ಮಾವಿನ ಕಾಯಿಗಳನ್ನು ಒಂದೇ ದಿನ 80 ಟನ್ ಮಾರುಕಟ್ಟೆಗೆ ಸರಬರಾಜು ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ ರೈತನೊಬ್ಬ 19 ಟ್ರಾಕ್ಟರ್ ಲೋಡ್ ಮಾವನ್ನು ಮಾರುಕಟ್ಟೆಗೆ ಸರಬರಾಜು ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.
ಕಿಸಾನ್ ಆಗ್ರೋ ಸೆಂಟರ್ ಖಾಸಗಿ ಮಾರುಕಟ್ಟೆಯಲ್ಲಿನ ರಾಜಧಾನಿ ಮಂಡಿಯ ಮಾಲಕ ಮುಜಾಯಿದ್ ಅನ್ಸಾರಿ ಮತ್ತು ಸಹೋದರರು ಅತೀ ಹೆಚ್ಚು ಮಾವು ಮಾರುಕಟ್ಟೆಗೆ ಸರಬರಾಜು ಮಾಡಿದ ರೈತ ಶಂಕರಪ್ಪರನ್ನು ಸನ್ಮಾನಿಸಿದರು.
ಕಳೆದ 10 ವರ್ಷಗಳಿಂದ ತಾಲೂಕಿನಲ್ಲಿ ಸರಿಯಾಗಿ ಮಳೆಯಿಲ್ಲದೆ ಮಾವಿನ ಮರಗಳು ಒಣಗುತ್ತಿದ್ದು, ಕಳೆದ ವರ್ಷ ಸುಮಾರು 2 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ಒಣಗಿದ್ದ ಮಾವಿನ ಮರಗಳನ್ನು ಸೌದೆಗಾಗಿ ಕಡಿಯಲಾರಂಬಿಸಿದ್ದರು. ಕಳೆದ ಹಿಂಗಾರಿನಲ್ಲಿ ಬಿದ್ದ ಮಳೆಗೆ ತಾಲೂಕಿನಲ್ಲಿ ಸುಮಾರು ಕೆರೆಗಳಲ್ಲಿ ನೀರು ತುಂಬಿದ್ದು, ಅಂತರ್ಜಲ ಮಟ್ಟ ಸ್ವಲ್ಪ ಮಟ್ಟಿಗೆ ವೃದ್ದಿಗೊಂಡ ಕಾರಣ ತೇವಾಂಶವಿಲ್ಲದೆ ಒಣಗುವ ಸ್ಥಿತಿಯಲ್ಲಿದ್ದ ಮಾವಿನ ಮರಗಳು ಚಿಗುರೊಡೆಯತೊಡಗಿದವು. ಇದರಿಂದ ತಾಲೂಕಿನ ಮಾವು ಬೆಳೆಗಾರರ ಮುಖದಲ್ಲಿ ಸಂತಸ ಮೂಡಿತ್ತು. ಅದರಂತೆ ವಾತಾವರಣ ಕೈಹಿಡಿದ ಪರಿಣಾಮ ಮಾವು ಬೆಳೆಗಾರರಿಗೆ ಒಳ್ಳೆಯ ಫಸಲು ಸಿಕ್ಕಿದೆ.
ಮಾರುಕಟ್ಟೆಯೂ ಸಹ ರೈತನ ಕೈ ಹಿಡಿದ ಪರಿಣಾಮ ಈ ಬಾರಿ ಮಾರುಕಟ್ಟೆಯಲ್ಲಿ ರೈತರಿಗೆ ಒಳ್ಳೆಯ ಬೆಲೆ ಸಿಕ್ಕಿದೆ. ಇದರಿಂದ ಸುಮಾರು 10 ವರ್ಷಗಳಿಂದ ಕಂಗಾಲಾಗಿದ್ದ ಮಾವು ಬೆಳೆಗಾರರು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ನಾನು ಬೆಳೆದ ತೋತಾಪುರಿ ಕಾಯಿಗೆ ಮಾರುಕಟ್ಟೆಯಲ್ಲಿ ಪ್ರತಿ ಟನ್‌ಗೆ 19 ಸಾವಿರ ಬೆಲೆ ಸಿಕ್ಕಿದ ಪರಿಣಾಮ ಉತ್ತಮ ಲಾಭ ಪಡೆಯಲು ಸಹಕಾರಿಯಾಯಿತು ಎಂದು ರೈತ ಬ್ಯಾಗಲ ಶಂಕರಪ್ಪತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.