ಪರಿಸರದ ಅಸಮತೋಲನದಿಂದ ಸಮಸ್ಯೆ ಉದ್ಭವ: ಸುಜಾತಾ
ಅಂಕೋಲಾ, ಜು.3: ಪರಿಸರದ ಅಸಮತೋಲನದಿಂದಾಗಿ ಈಗಾಗಲೇ ಜನರು ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಅರಣ್ಯ ನಾಶವೇ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಜಾಗೃತಗೊಂಡು ಅರಣ್ಯ ಇಲಾಖೆ ವತಿಯಿಂದ ಕೋಟಿ ವೃಕ್ಷ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಸುಜಾತಾ ಗಾಂವ್ಕರ ಅಭಿಪ್ರಾಯಪಟ್ಟರು.
ಪಟ್ಟಣದ ಪಿ.ಎಂ. ಹೈಸ್ಕೂಲ್‌ನ ರೈತ ಭವನದಲ್ಲಿ ಅರಣ್ಯ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಪುರಸಭೆ, ಶಿಕ್ಷಣ ಇಲಾಖೆ, ಪಿ.ಎಂ. ಹೈಸ್ಕೂಲ್ ಇವರ ಆಶ್ರಯದಲ್ಲಿ ನಡೆದ ಕೋಟಿ ವೃಕ್ಷ ಆಂದೋಲನದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರಸಭೆ ಅಧ್ಯಕ್ಷ ಭಾಸ್ಕರ ನಾರ್ವೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇ.80ರಷ್ಟು ಅರಣ್ಯವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯು ಈ ಹಿಂದೆ ಸಮೃದ್ಧವಾಗಿತ್ತು. ಆದರೆ ಅರಣ್ಯನಾಶದಿಂದಾಗಿ ಈಗ ಶೇ.65ಕ್ಕೆ ಇಳಿದಿರುವುದು ವಿಷಾದದ ಸಂಗತಿ. ಪ್ರತಿ ಸಂಘ-ಸಂಸ್ಥೆಯವರು ಹಾಗೂ ಇಲಾಖೆಯವರು ಜನರಿಗೆ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ಜಾಗದಲ್ಲಿ ಒಂದೊಂದು ಗಿಡ ನೆಟ್ಟರೂ ಕೋಟಿಗಟ್ಟಲೆ ಗಿಡ ಸೃಷ್ಟಿ ಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಮಾತನಾಡಿ, ಕಾರವಾರ ಉಪ ವಲಯದಲ್ಲಿ 3 ಲಕ್ಷ ಗಿಡವನ್ನು ನೆಡುವ ಉದ್ದೇಶ ಹೊಂದಿದ್ದು, ಖಾಲಿ ಜಾಗದಲ್ಲಿ ಗಿಡ ನೆಡುವ ಮೂಲಕ ಹಸಿರು ವಲಯ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಗಿಡ-ಮರಗಳ ಕೊರತೆಯಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗೆ ಕಾರಣವಾಗಿದೆ. ಇದರಿಂದಾಗಿ ಪ್ರತಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಮನೆಯ ಹಿತ್ತಲಿನಲ್ಲಿ ಒಂದು ಗಿಡವನ್ನಾದರೂ ನೆಡಬೇಕು ಎಂದರು.
ಜಿಪಂ ಸದಸ್ಯೆ ಸರಳಾ ನಾಯಕ, ತಾಪಂ ಸದಸ್ಯ ಮಂಜುನಾಥ ನಾಯ್ಕ, ಶಿಕ್ಷಣಾಧಿಕಾರಿ ನಾಗರಾಜ ನಾಯಕ, ಪ್ರಾಚಾರ್ಯ ಆರ್. ವಿ. ಕೇಣಿ ಮಾತನಾಡಿದರು. ತಹಶೀಲ್ದಾರ್ ವಿ.ಜೆ.ಲಾಂಜೇಕರ, ಕಾರವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಿ. ಸಾವಂತ ಉಪಸ್ಥಿತರಿದ್ದರು.
ಅಂಕೋಲಾ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಂ. ನಾಯ್ಕ ಸ್ವಾಗತಿಸಿದರು. ಕ್ಷಮಾ ಸಂಗಡಿಗರು ಪ್ರಾರ್ಥಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಂಡುರಂಗ ಕೆ. ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಸಿಸಿ ಅಧಿಕಾರಿ ಜಿ. ಆರ್.ತಾಂಡೇಲ ನಿರೂಪಿಸಿದರು. ಸಹಾಯಕ ಮುಖ್ಯಾಧ್ಯಾಪಕ ಪಿ.ಪಿ. ಮಲ್ಯ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಪಿ.ಎಂ. ಹೈಸ್ಕೂಲ್‌ನ ಎನ್‌ಸಿಸಿ ಅಧಿಕಾರಿ ಜಿ.ಆರ್. ತಾಂಡೇಲ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿ ಪರಿಸರ ಜಾಗೃತಿ ಮೂಡಿಸಲಾಯಿತು. ನಂತರ ಪಿ.ಎಂ. ಹೈಸ್ಕೂಲ್ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು.