×
Ad

ನೋಡಲು ಆಕರ್ಷಕ, ಮೋಜಿಗೆ ಹೇಳಿ ಮಾಡಿಸಿದ ತಾಣ ‘ನಾಗರಮಡಿ’

Update: 2016-07-03 23:15 IST

<ಶ್ರೀನಿವಾಸ ಬಾಡಕರ್

ಕಾರವಾರ, ಜು.3: ಮಳೆಗಾಲ ಆರಂಭವಾದರೆ ಅನೇಕ ಕಡೆಗಳಲ್ಲಿ ಬೆಟ್ಟ ಗುಡ್ಡಗಳ ತಪ್ಪಲಿನಿಂದ ಅಲ್ಲಲ್ಲಿ ಚಿಕ್ಕ-ಪುಟ್ಟ ಜಲಪಾತಗಳು ಹರಿಯುತ್ತವೆೆ. ನೋಡಲು ಆಕರ್ಷಕವಾಗಿರುವ ಇಂತಹ ಜಲಪಾತಗಳಲ್ಲಿ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ಬಳಿ ಇರುವ ನಾಗರಮಡಿ ಎನ್ನುವ ಜಲಪಾತವು ಒಂದಾಗಿದ್ದು ಇದು ವಿಶಿಷ್ಟ ಹಾಗೂ ವಿಭಿನ್ನತೆಯ ರೂಪವಾಗಿದೆ. ಈ ಜಲಾಶಯಗಳು ಕಾಡಿನ ಮಧ್ಯದಲ್ಲಿದ್ದರೂ ನೋಡುಗರಿಗೆ ಆಕರ್ಷನೀಯವಾಗಿದೆ. ಪ್ರತಿನಿತ್ಯ ತಂಡೋಪತಂಡವಾಗಿ ನೂರಾರು ಜನರು ಆಗಮಿಸುತ್ತಿದ್ದು. ಪ್ರಕೃತಿಯ ನಡುವಿನ ಜಲಾಶಯಗಳ ಸವಿಯನ್ನು ಸವಿಯುತ್ತಾ ಮೋಜಿನಲ್ಲಿ ಮಗ್ನರಾಗುತ್ತಾರೆ.

ಕಾಡು ಹತ್ತಿ ಇಳಿಯಬೇಕು: 

ಈ ಜಲಾಶಯದ ಸೌಂದರ್ಯ ಸವಿಯಬೇಕಾದರೆ ತಾಲೂಕಿನ ಚೆಂಡಿಯಾಗೆ ತೆರಳಿ, ಚೆಂಡಿಯಾ ರಸ್ತೆಯಿಂದ ಸುಮಾರು 2 ಕಿ.ಮೀ. ಚಲಿಸಬೇಕು. ಅಲ್ಲಿಂದ ಕಾಲು ಹಾದಿಯಲ್ಲಿ ಸುಮಾರು ಒಂದು ಕಿ.ಮೀ. ನಷ್ಟು ಕಾನನದ ಮಧ್ಯದಿಂದ ಕಾಡು ದಾರಿ ಮೂಲಕ ಹತ್ತಿಳಿಯಬೇಕು. ಅಲ್ಲಿಯೇ ಇರುವ ಬಂಡೆಗಲ್ಲುಗಳ ಮೇಲಿಂದ ನಾಗರಮಡಿ ಎನ್ನುವ ಕಿರು ಜಲಪಾತ ಸುಮಾರು 30 ಅಡಿ ಎತ್ತರದಿಂದ ನೀರು ಧುಮುಕುತ್ತದೆ. ನೋಡಲು ಮನಮೋಹಕವಾಗಿರುವ ಈ ಕಿರು ಜಲಪಾತದಲ್ಲಿ ಸಾರ್ವಜನಿಕರು ಜಲಕ್ರೀಡೆಯಲ್ಲಿ ಮಗ್ನರಾಗಿರುತ್ತಾರೆ. 35 ಅಡಿ ಗಾತ್ರದ ಬಂಡೆಗಲ್ಲು:

ನಾಗರಮಡಿಯಲ್ಲಿ ಇನ್ನೊಂದು ವಿಶಿಷ್ಟತೆ ಇದೆ. ಅದೇ ಸುಮಾರು 35 ಅಡಿಯಷ್ಟು ಎತ್ತರ ಇರುವ ಬೃಹತ್ ಗಾತ್ರದ ಬಂಡೆಗಲ್ಲು. ಅದರ ಮಧ್ಯದಲ್ಲಿ ಇರುವ ಗುಹೆಯಿಂದ ಕಾನನದಿಂದ ಹರಿದು ಬರುವ ಜಲಧಾರೆ ಪ್ರಪಾತಕ್ಕೆ ಧುಮುಕುವುದು ನೋಡುವುದೇ ಒಂದು ರೀತಿಯ ರೋಮಾಂಚನಕಾರಿ ಅನುಭವ ನೀಡುತ್ತದೆ. ರಜಾ ಅವಧಿಯಲ್ಲಿ ನಾಗರಮಡಿಯ ಅನುಭವ ಪಡೆಯಲು ಸಾಕಷ್ಟು ಜನ ಉತ್ಸುಕತೆಯಿಂದ ಕಾಯುತ್ತಿರುತ್ತಾರೆ. ಏನಿದು ನಾಗರಮಡಿ:

ಪ್ರದೇಶದಲ್ಲಿ ನಾಗರಮಡಿ ಎಂದು ನಾಮಾಂಕಿತವಾಗಲು ಒಂದು ಇತಿಹಾಸವೇ ಇದೆ ಎನ್ನುತ್ತಾರೆ ಸ್ಥಳೀಯರು. ಸಾಕಷ್ಟು ವರ್ಷಗಳ ಹಿಂದೆ ಈ ಸ್ಥಳದಲ್ಲಿ ನಾಗರ ಹಾವುಗಳು ಈಜಿ ಬಂದು ನೀರು ಕುಡಿಯಲು ಬರುತ್ತಿದ್ದವು ಎನ್ನುವುದು ಇತಿಹಾಸ. ಇಲ್ಲಿನ ಪ್ರದೇಶದಲ್ಲಿ ಇರುವ ಹೊಂಡಗಳಲ್ಲಿ ಒಂದು ಗುಹೆ ಇದೆ. ಆ ಗುಹೆಯಲ್ಲಿ ಇನ್ನೂ ಹಾವುಗಳ ವಾಸವಾಗಿವೆ ಎನ್ನುವುದು ಜನರ ನಂಬಿಕೆಯಾಗಿದೆ.

        ಇದರಿಂದಾಗಿ ನಾಗ ಎಂದರೆ ನಾಗರಹಾವು ಹಾಗೂ ಸ್ಥಳೀಯ ಭಾಷೆಯ ಪ್ರಕಾರ ಮಡಿ ಎಂದರೆ ಹೊಂಡ ಎಂದರ್ಥ. ಇದರಿಂದಾಗಿ ಈ ಸ್ಥಳಕ್ಕೆ ನಾಗರಮಡಿ ಎಂದು ನಾಮಾಂಕಿತವಾಯಿತು ಎನ್ನಲಾಗಿದೆ. ನಾಗರಮಡಿಯಲ್ಲಿರುವ ಬಂಡೆಕಲ್ಲುಗಳು ಸಹ ಜನರನ್ನು ಆಕರ್ಷಿಸುತ್ತವೆ. ಇದರ ಮಧ್ಯದಿಂದ ಹರಿಯುವ ಜಲಧಾರೆಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರೂ ನಿರ್ಮಲ ನೀರಿನ ರಾಶಿಯಲ್ಲಿ ಜಲಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೆ. ರಜಾ ಅವಧಿಯಲ್ಲಿ ಸಾಕಷ್ಟು ಸಾರ್ವಜನಿಕರು ನಾಗರಮಡಿಗೆ ತೆರಳುತ್ತಾರೆ. ಸ್ಥಳೀಯ ಜನರು ಸೇರಿದಂತೆ ಕಾರವಾರ ತಾಲೂಕಿನ ವಿವಿಧ ಪ್ರದೇಶದಿಂದ ಹಾಗೂ ಸೀ ಬರ್ಡ್ ನೌಕಾನೆಲೆಯ ಸಿಬ್ಬಂದಿ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಜೆಯ ಮಜಾವನ್ನು ಈ ಜಲಾಶಯದಲ್ಲಿ ಈಜುತ್ತಾ ದಿನ ಕಳೆಯುತ್ತಾರೆ. ಜಾಗರೂಕತೆ ಅಗತ್ಯ :

              ನಾಗರಮಡಿ ಮಳೆಗಾಲದಲ್ಲಿ ಹುಟ್ಟುವ ಚಿಕ್ಕ ಜಲಪಾತವಾಗಿದ್ದರೂ ಬೆಟ್ಟದ ಮೇಲಿಂದ ಹರಿಯುವ ನೀರು ಶಕ್ತಿಶಾಲಿ ಹಾಗೂ ರಭಸದಿಂದ ಹರಿಯುತ್ತದೆ. ಅಲ್ಲದೆ ನಾಗರಮಡಿಯಲ್ಲಿರುವ ಹೊಂಡವು ಅತೀ ಆಳವಾಗಿದ್ದು ಈಜಲು ಮೇಲಿನಿಂದ ಜಿಗಿಯುವ ವೇಳೆಯಲ್ಲಿ ಅತೀ ಜಾಗರೂಕತೆ ಆವಶ್ಯಕವಾಗಿದೆ. ಇದೇ ಸ್ಥಳದಲ್ಲಿ ಈಜಲು ತೆರಳಿದವರು ಮೃತಪಟ್ಟ ಘಟನೆಯೂ ನಡೆದಿವೆ. ಇದರಿಂದಾಗಿ ಜಾಗರೂಕತೆ ವಹಿಸಬೇಕಿದೆ. -ರವಿ ಗೌಡ, ಚಾರಣ ಪ್ರಿಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News