×
Ad

ಅಸಮರ್ಪಕ ಕಾಮಗಾರಿಗೆ ಜನರ ಆಕ್ರೋಶ

Update: 2016-07-03 23:16 IST

ಕಾರವಾರ, ಜು.3: ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕ್ರೀಡಾ ಭವನದ ಮುಂದೆ ಮಳೆನೀರು ನಿಂತಿದ್ದು, ಗುತ್ತಿಗೆದಾರರೊಬ್ಬರ ಅಸಮರ್ಪಕ ಕಾಮಗಾರಿಯಿಂದಾಗಿ ಈ ರೀತಿಯಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಕಟ್ಟಡ ಕಾಮಗಾರಿಯೊಂದಕ್ಕೆ ತೆಗೆಯಲಾದ ಹೊಂಡವನ್ನು ಸರಿಯಾಗಿ ಮುಚ್ಚದೆ ಹಾಗೆ ಬಿಟ್ಟಿರುವುದು ಅಪಾಯಕ್ಕೆ ಆಹ್ವಾನಿಸಿದೆ. ಈ ಭಾಗದಲ್ಲಿ ಭೂಕುಸಿತ ಉಂಟಾಗುತ್ತಿದೆ. ಹೊಂಡ ಕಂದಕದಂತೆ ಮಾರ್ಪಾಡಾಗಿದ್ದು, ಶಾಲಾ ಕಾಲೇಜು ಮಕ್ಕಳು ಈ ಪ್ರದೇಶದಲ್ಲಿ ಹೆಚ್ಚಿಗೆ ಆಡಲು ಆಗಮಿಸುವುದು ಆತಂಕಕ್ಕೆ ಕಾರಣವಾಗಿದೆ. ನೀರು ತುಂಬಿದ ಸ್ಥಳದಲ್ಲಿ ಯಾವುದೇ ಸೂಚನಾ ಫಲಕವಿಲ್ಲ. ಹೊಂಡದ ಸುತ್ತಲೂ ಬೇಲಿ ನಿರ್ಮಾಣವೂ ನಡೆದಿಲ್ಲ.

ಪಕ್ಕದಲ್ಲಿರುವ ಕಾಲೇಜು ಕಾಂಪೌಂಡ್ ಕೂಡ ಕುಸಿಯುವ ಹಂತದಲ್ಲಿದ್ದು, ಸಮೀಪದ ರಸ್ತೆಯಲ್ಲಿ ಸಂಚರಿಸುವವರು ಭಯ ಪಡುವಂತಾಗಿದೆ. ಸರಕಾರಿ ಕಾಲೇಜಿಗೆ ಮಂಜೂರಾದ ಎರಡು ಕೊಠಡಿಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರದವರು ಮುಂದಾಗಿದ್ದು, ಇದಕ್ಕೆ ಅಡಿಪಾಯ ಹಾಕಲು ತೆಗೆದಿರುವ ಗುಂಡಿಯೇ ಅವಾಂತರಗಳಿಗೆ ಮೂಲ ಕಾರಣವಾಗಲಿದೆ. ಅಡಿಪಾಯ ಹಾಕಲು ಗುಂಡಿ ತೆಗೆದ ನಂತರ ಮಳೆ ಆರಂಭವಾಗಿದ್ದು, ಗುಂಡಿಯನ್ನು ಮುಚ್ಚಲು ಸಾಧ್ಯವಾಗಿಲ್ಲ. ಕೆಲದಿನಗಳ ಮಟ್ಟಿಗೆ ಮಳೆ ನಿಂತಾಗಲೂ ಗುತ್ತಿಗೆದಾರರು ಈ ಬಗ್ಗೆ ಗಮನ ಹರಿಸಿಲ್ಲ. ಈಗಾಗಲೇ ಕೆಲ ವಿದ್ಯಾರ್ಥಿಗಳು ಈ ಗುಂಡಿಯಲ್ಲಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಇಷ್ಟಾದರೂ ಗುಂಡಿ ಮುಚ್ಚುವ ಕೆಲಸ ನಡೆದಿಲ್ಲ ಎಂದು ಸುತ್ತಮುತ್ತಲಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News