ಆಯನೂರು ಪಪಂ ಮೇಲ್ದರ್ಜೆಗೆ ಚಿಂತನೆ: ಸಚಿವ ಕಾಗೋಡು
ಶಿವಮೊಗ್ಗ,ಜು.3: ಶಿವಮೊಗ್ಗ ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಸಂಪರ್ಕ ಕೇಂದ್ರವಾಗಿರುವ ಹಾಗೂ ಕೋಹಳ್ಳಿ ಸೇರಿ ಎರಡು ಗ್ರಾಪಂಗಳನ್ನು ಹೊಂದಿರುವ ಆಯನೂರನ್ನು ಪಟ್ಟಣ ಪಂಚಾಯತ್‌ಆಗಿ ಮೇಲ್ದರ್ಜೆಗೇರಿಸುವ ಚಿಂತನೆ ಇದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಹೇಳಿದ್ದಾರೆ.
ಆಯನೂರಿನಲ್ಲಿ ನಿರ್ಮಿಸಲಾಗಿರುವ ಕೋರ್‌ಸೈನ್ಸ್ ಸೆಂಟರ್ ಉದ್ಘಾಟನೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಆಯನೂರು ಸಾಗರ ಮಾರ್ಗವಾಗಿ ಸಿಗುವ ಪ್ರಮುಖ ಗ್ರಾಮವಾಗಿದ್ದು, ಈ ಮೊದಲಿನಿಂದಲೂ ಇಲ್ಲಿನ ಸಂತೆ ಖ್ಯಾತಿ ಪಡೆಯುವ ಮೂಲಕ ವಾಣಿಜ್ಯ ಕೇಂದ್ರವಾಗಿದೆ. ಅಲ್ಲದೆ ಕೋಹಳ್ಳಿ ಹಾಗೂ ಆಯನೂರು ಎರಡು ಗ್ರಾಪಂಗಳನ್ನು ಹೊಂದಿದ್ದು, ಜನಸಂಖ್ಯೆ ಆಧಾರದ ಮೇಲೆ ಪಪಂಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಚಿಂತಿಸಲಾಗುವುದು ಎಂದರು.
ಗ್ರಾಮವಾಗಿದ್ದ ಆಯನೂರನ್ನು ಕಳೆದ ವರ್ಷವಷ್ಟೆ ಹೋಬಳಿ ಕೇಂದ್ರವಾಗಿ ಘೋಷಿಸಲಾಗಿದ್ದು, ಇಲ್ಲಿನ ಸಂತೆ ಮೈದಾನದಲ್ಲಿ ಮತ್ತಷ್ಟು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ಇದೊಂದು ಉತ್ತಮ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸರಕಾರ ಬದ್ಧವಿದೆ ಎಂದು ಅವರು ಹೇಳಿದರು.
ಆಯನೂರು ಸ್ಥಳೀಯ ಜನ ಪ್ರತಿನಿಧಿಗಳ ಆಸಕ್ತಿಯಿಂದ ಉತ್ತಮ ಶೈಕ್ಷಣಿಕ ಕೇಂದ್ರವಾಗಿದೆ. ಪ್ರಾದೇಶಿಕ ವಿಜ್ಞಾನ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತಾರಾಲಯ ಸೇರಿದಂತೆ ಉತ್ತಮ ವೈಜ್ಞ್ಞಾನಿಕ ಜ್ಞಾನ ಗ್ರಾಮೀಣ ಮಕ್ಕಳಿಗೆ ಸಿಗುವಂತಾಗಿದೆ. ಇತ್ತೀಚೆಗೆ ಗ್ರಾಮೀಣ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಗಮನಾರ್ಹ. ಈ ನಿಟ್ಟಿನಲ್ಲಿ ಆಯನೂರು ಒಂದು ಉತ್ತಮ ಕೇಂದ್ರವಾಗಿ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ಆಯನೂರಿಗೆ ಪೊಲೀಸ್ ಠಾಣೆ, ನಾಡ ಕಚೇರಿಗೆ ಕಟ್ಟಡ, ರೈತ ಸಂಪರ್ಕ ಕೇಂದ್ರ ಆರಂಭಿಸುವ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಆಯನೂರು ರಾಜ್ಯದಲ್ಲಿಯೇ ಒಂದು ಮಾದರಿ ಗ್ರಾಮವಾಗಿ ಹೊರಹೊಮ್ಮಲಿದ್ದು ಸರಕಾರ ಇಲ್ಲಿಗೆ ಹೆಚ್ಚು ಸೌಲಭ್ಯಗಳನ್ನು ನೀಡಬೇಕು ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಪಂ ಸದಸ್ಯರಾದ ಕಲಗೋಡು ರತ್ನಾಕರ, ತಮ್ಮಡಿಹಳ್ಳಿ ನಾಗರಾಜ್, ಆಯನೂರು ಗ್ರಾಪಂಅಧ್ಯಕ್ಷ ಎನ್.ಪ್ರಭಾಕರ್, ತಾಪಂ ಸದಸ್ಯೆ ಶಕುಂತಲಾ ಮಹೇಶ್ವರಪ್ಪ, ಶಿವಮೊಗ್ಗ ಉಪ ವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಪ್ಪ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಎ.ಎಲ್.ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.