×
Ad

‘ಆರ್‌ಟಿಇ ಮಕ್ಕಳಿಂದ’ ಊಟದ ಲೆಕ್ಕದಲ್ಲಿ 35 ಸಾವಿರ ರೂ.ವಸೂಲಿ: ಆರೋಪ

Update: 2016-07-03 23:47 IST

ಬೆಂಗಳೂರು, ಜು.3: ಖಾಸಗಿ ಶಾಲೆಯೊಂದು ಆರ್‌ಟಿಇ ಅಡಿ ಪ್ರವೇಶ ಪಡೆದ ಬಡ ವಿದ್ಯಾರ್ಥಿಗಳ ಪೋಷಕರಿಂದಲೇ ಊಟದ ಲೆಕ್ಕದಲ್ಲಿ 35 ಸಾವಿರ ರೂ. ವಸೂಲಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ಉತ್ತರ ವಲಯದ ಕೆಂಪಾಪುರ ವಾಪ್ತಿಯಲ್ಲಿನ ಜೈನ್ ಹೆರಿಟೇಜ್ ಶಾಲೆಯವರು ಪಠ್ಯಪುಸ್ತಕ, ಬೆಲ್ಟ್,ಊಟ ಸೇರಿ ಇನ್ನಿತರ ವಸ್ತುಗಳಿಗಾಗಿ ಆರ್‌ಟಿಇ ಅಡಿ ದಾಖಲಾದ ವಿದ್ಯಾರ್ಥಿಗೆ 39,200 ರೂ. ವಸೂಲಿ ಮಾಡಿದ್ದು, ಇದರಲ್ಲಿ ಕೇವಲ ಊಟದ ಲೆಕ್ಕದಲ್ಲಿ 35 ಸಾವಿರ ರೂ. ಪಡೆಯಲಾಗಿದೆ. ಅಲ್ಲದೆ, ಇದಕ್ಕೆ ಶಾಲೆಯವರು ಮಗುವಿನ ಪೋಷಕರಿಗೆ ರಶೀದಿಯನ್ನೂ ನೀಡಿದ್ದಾರೆ ಎಂದು ಆರ್‌ಟಿಇ ಸ್ಟೂಡೆಂಟ್ಸ್ ಆ್ಯಂಡ್ ಪೇರೆಂಟ್ಸ್ ಅಸೋಸಿ ಯೇಶನ್ ಪ್ರಧಾನ ಕಾರ್ಯದರ್ಶಿ ಯೋಗಾನಂದ ಆರೋಪಿಸಿದ್ದಾರೆ.
ಸಿಎಂ, ಸಚಿವರಿಗೆ ದೂರು: ಹೆಚ್ಚುವರಿ ಶುಲ್ಕ ವಸೂಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್‌ಟಿಇ ಸ್ಟೂಡೆಂಟ್ಸ್ ಆ್ಯಂಡ್ ಪೇರೆಂಟ್ಸ್ ಅಸೋಸಿಯೇಶನ್ ಸದಸ್ಯರು ಹಾಗೂ ಪೋಷಕರು ಮುಖ್ಯಮಂತ್ರಿ ಕಚೇರಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ದೂರು ನೀಡಿದ್ದಾರೆ.
ಖಾಸಗಿ ಶಾಲೆಗಳ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ತನ್ವೀರ್ ಸೇಠ್ ಭರವಸೆ ನೀಡಿದ್ದಾರೆ ಎಂದು ಯೋಗಾನಂದ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News