ಉನ್ನತ ಯೋಚನೆಯಿಂದ ಬದುಕು ಕಟ್ಟಿಕೊಳ್ಳಿ
ತೀರ್ಥಹಳಿ,ಜು.4: ಉತ್ತಮ ಸನ್ನಡತೆ, ವಿವೇಚನೆ ಹಾಗೂ ಯೋಜನೆಯಿಂದ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಮಾಜಿ ಸಚಿವ ಹಾಗೂ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ನೆರವಿನೊಂದಿಗೆ ಶನಿವಾರ ನಡೆದ ತುಂಗಾ ಕಾಲೇಜಿನ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ನೂತನ ಬಸ್‌ಗೆ ಚಾಲನೆ ನೀಡಿ ಹಾಗೂ ಮಹಿಳಾ ವಸತಿನಿಲಯದ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಲೆನಾಡಿನ ಇತಿಹಾಸದಲ್ಲಿ ತುಂಗಾ ವಿದ್ಯಾವರ್ಧಕ ಸಂಘದ ತನ್ನದೇ ಆದ ಇತಿಹಾಸವಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತಾಲೂಕಿನ ತುಂಗಾ ಮಹಾವಿದ್ಯಾಲಯವು ಸಾವಿರಾರು ವಿದ್ಯಾವಂತರನ್ನು ರೂಪಿಸುವುದರ ಜೊತೆಗೆ ಉದ್ಯೋಗಸ್ಥರನ್ನಾಗಿಸಿದ ಕೀರ್ತಿ ತನ್ನದಾಗಿಸಿದೆ.
ಈ ತಾಲೂಕಿನ ಹಳೆ ವಿದ್ಯಾರ್ಥಿಗಳು ವಿದ್ಯಾವರ್ಧಕ ಸಂಘ, ಪೋಷಕರ ನೆರವಿನೊಂದಿಗೆ ವಿದ್ಯಾರ್ಥಿಗಳ ಓಡಾಟಕ್ಕೆ ಬಸ್ ಸೌಕರ್ಯ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
ಈ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳಸಂಘಕ್ಕೆ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಕಾಲೇಜಿನ ಪ್ರಾಂಶುಪಾಲ ಬಿ.ಗಣಪತಿ, ಜಿಪಂ ಮಾಜಿ ಸದಸ್ಯ ಪದ್ಮನಾಬ್, ಕಾಲೇಜು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.