×
Ad

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ

Update: 2016-07-04 23:58 IST

ಬೆಂಗಳೂರು, ಜು.4: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಕಾನೂನು ಬಾಹಿರವಾಗಿ ನಿವೇಶನ ಹಾಗೂ ಬದಲಿ ನಿವೇಶನ ಹಂಚಿಕೆಯಲ್ಲಿ ಭಾಗಿಯಾಗಿರು ವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಯಮ 60ರಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ನಿವೃತ್ತ ಐಎಎಸ್ ಅಧಿಕಾರಿ ಡಾ.ಎಚ್.ಶಶಿಧರ್ ನೇತೃತ್ವದ ಸಮಿತಿಯು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಸಾಲಿನ ಸೆಪ್ಟಂಬರ್‌ನಲ್ಲಿ ವರದಿ ನೀಡಿದ್ದು, ಅದರಂತೆ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.
ಈಗಾಗಲೆ 12 ನಿವೇಶನಗಳ ಮಂಜೂರಾತಿ ರದ್ದುಗೊಳಿಸಲಾಗಿದೆ. ಕಾನೂನಿನ ತೊಡಕು ಇರುವ ಹಿನ್ನೆಲೆಯಲ್ಲಿ ಆರು ನಿವೇಶನಗಳನ್ನು ನ್ಯಾಯಾಲಯದ ಮೂಲಕ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಹನುಮಂತೇಗೌಡ, ತಿಪ್ಪೇಗೌಡ ಅಥವಾ ಇನ್ಯಾವುದೇ ಗೌಡನಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಬಿಡಿಎಯಲ್ಲಿ ನಡೆದಿರುವ ಈ ಅಕ್ರಮಗಳ ಕುರಿತು ನಮ್ಮ ಪಕ್ಷದ ಸದಸ್ಯರಾದ ಎಸ್.ಟಿ.ಸೋಮಶೇಖರ್, ಕೆ.ಎನ್.ರಾಜಣ್ಣ ಸೇರಿದಂತೆ ಇನ್ನಿತರರು ಮೊದಲು ಪ್ರಸ್ತಾಪ ಮಾಡಿದ್ದು, ನೀವಲ್ಲ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದ ಅವರು, ಬಿಡಿಎ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ನಮ್ಮ ಸರಕಾರ ಅಕ್ರಮಗಳ ತನಿಖೆ ನಡೆಸುತ್ತಿದೆ ಎಂದರು.
2008-2013(ಎಪ್ರಿಲ್)ರ ವರೆಗೆ 1631 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ನಮ್ಮ ಸರಕಾರ 2013-2016ರ ಜೂನ್‌ವರೆಗೆ 373 ನಿವೇಶನಗಳು ಹಂಚಿಕೆಯಾಗಿವೆ. ಈಗ ಪ್ರಚಾರಕ್ಕಾಗಿ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಅಕ್ರಮಗಳಲ್ಲಿ ಪಾಲ್ಗೊಂಡಿರುವವರು ಎಷ್ಟೇ ಪ್ರಭಾವಿಗಳಾಗಿರಲಿ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೂ ಮುನ್ನ ಉತ್ತರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಡಿಎ ಭ್ರಷ್ಟಾಚಾರದ ಸಂಸ್ಥೆಯಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದೀರಾ, ಹಾಗಾದರೆ, ನೀವು ಅಧಿಕಾರದಲ್ಲಿದ್ದಾಗ ಬಿಡಿಎ ಶಿಷ್ಟಾಚಾರದ ಸಂಸ್ಥೆಯಾಗಿತ್ತೆ ಎಂದು ಪ್ರಶ್ನಿಸಿದರು.
ಶಶಿಧರ್ ವರದಿಯನ್ನು ರಾಜ್ಯ ಸರಕಾರ ಯಥಾವತ್ತಾಗಿ ಒಪ್ಪಿಕೊಂಡಿದ್ದು, ಅವರು ಮಾಡಿರುವಂತಹ ಶಿಫಾರಸ್ಸುಗಳನ್ನು ಜಾರಿ ಮಾಡು ವಂತೆ ಈಗಾಗಲೆ ಆದೇಶ ಹೊರಡಿಸಲಾಗಿದೆ. ತಿಪ್ಪೇಸ್ವಾಮಿ ಎಂಬ ಬಿಡಿಎ ಗುಮಾಸ್ತನನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಅವರು ಹೇಳಿದರು.
ಶಶಿಧರ್ ಅವರ ಸಮಿತಿಯ ಮುಂದೆ ಬರದೆ ಇರುವಂತಹ ಯಾವುದಾದರೂ ಪ್ರಕರಣಗಳಿದ್ದರೆ, ಸರಕಾರಕ್ಕೆ ತಿಳಿಸಿ ಅವುಗಳನ್ನು ಪರಿಶೀಲಿಸಿ ಅಗತ್ಯಕ್ರಮಗಳನ್ನು ಕೈಗೊಳ್ಳುತ್ತೇವೆ. ವಿನಾಕಾರಣ ಸರಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಪ್ರತಿಯೊಂದು ವಿಚಾರಕ್ಕೂ ಸಿಬಿಐ ತನಿಖೆಗೆ ಆಗ್ರಹಿಸುವ ನೀವು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಲಿಲ್ಲ. ನಾವು ಸೌಜನ್ಯಾ, ಡಿ.ಕೆ.ರವಿ, ಅಕ್ರಮ ಲಾಟರಿ, ಕ್ರಿಕೆಟ್ ಬೆಟ್ಟಿಂಗ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅವ್ಯವಹಾರ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇವೆ. ಆದರೆ, ಈವರೆಗೆ ಒಂದೇ ಒಂದು ಪ್ರಕರಣದ ತನಿಖೆಯೂ ಪೂರ್ಣಗೊಂಡಿಲ್ಲ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದೆ. ರಾಜ್ಯದಿಂದ ಆಯ್ಕೆಯಾಗಿರುವವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರ ಮೇಲೆ ಒತ್ತಡ ಹೇರಿ, ಆದಷ್ಟು ಶೀಘ್ರ ತನಿಖೆ ಪೂರ್ಣಗೊಳಿಸಿ, ಜನತೆಯ ಮುಂದೆ ಸತ್ಯಾಂಶವನ್ನು ಇಡುವ ಕೆಲಸವನ್ನು ಮಾಡಿ ಎಂದು ಜಾರ್ಜ್ ಆಗ್ರಹಿಸಿದರು.

ಬಾವಿಗಿಳಿದು ಬಿಜೆಪಿ ಧರಣಿ
ಬಿಡಿಎ ಕರ್ಮಕಾಂಡಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಅಂಕಿ- ಅಂಶಗಳು, ದಾಖಲೆ ಸಮೇತ ಉತ್ತರ ನೀಡಿ, ಹಾಗೆ ಸುಮ್ಮನೆ ಉತ್ತರ ನೀಡುವುದರಿಂದ ಯಾವುದೆ ಪ್ರಯೋಜನವಾಗುವುದಿಲ್ಲ. ಸರಕಾರದ ನಿಷ್ಕ್ರಿಯತೆಯಿಂದಾಗಿ ಬಿಡಿಎ ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಆನಂತರ, ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಸದನವನ್ನು ನಾಳೆ ಬೆಳಗ್ಗೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News