×
Ad

ಸಚಿವ ಆಂಜನೇಯ ಉತ್ತರಕ್ಕೆ ಸದಸ್ಯರ ನಡುವೆ ವಾಗ್ವಾದ

Update: 2016-07-04 23:59 IST

ಬೆಂಗಳೂರು, ಜು.4: ದಲಿತರ ಸ್ಮಶಾನಕ್ಕೆ ಪ್ರತ್ಯೇಕ ಸ್ಥಳ ನಿಗದಿ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ನೀಡಿದ ಉತ್ತರ ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಸೋಮವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯೆ ಮೋಟಮ್ಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಂಜನೇಯ, ದಲಿತರ ಸ್ಮಶಾನಕ್ಕಾಗಿ ಪ್ರತ್ಯೇಕ ಜಾಗ ನಿಗದಿ ಮಾಡುವ ಸಂಬಂಧ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಸಚಿವರ ಉತ್ತರದಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ, ಸಂವಿಧಾನದ ಕಲಂ 17ರ ಪ್ರಕಾರ ಜಾತಿಯ ಹೆಸರಿನಲ್ಲಿ ಪ್ರತ್ಯೇಕವಾಗಿ ಸ್ಮಶಾನಕ್ಕೆ ಜಾಗಗಳನ್ನು ನಿಗದಿ ಮಾಡುವಂತಿಲ್ಲ ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಡಿ.ಎಸ್.ವೀರಯ್ಯ, ದಲಿತರಿಗಾಗಿ ಸ್ಮಶಾನಕ್ಕೆ ಪ್ರತ್ಯೇಕ ಜಾಗದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬದುಕಿದ್ದಾಗ ಜಾತಿ ವ್ಯವಸ್ಥೆ ಜೀವಂತವಾಗಿರುತ್ತದೆ. ಸತ್ತ ನಂತರವೂ ಜಾತಿಗೆ ಅಂಟಿಕೊಂಡಿರಬೇಕೇ, ಸಂವಿಧಾನದ ಆಶಯಗಳನ್ನು ಪಾಲನೆ ಮಾಡಬಾರದೇ ಎಂದು ಪ್ರಶ್ನಿಸಿದ ಉಗ್ರಪ್ಪಗೆ ಪ್ರತ್ಯುತ್ತರ ನೀಡಿದ ಆಂಜನೇಯ, ಸಮಾಜದಲ್ಲಿ ಪ್ರತಿಯೊಂದು ಜಾತಿಗೂ ಪ್ರತ್ಯೇಕ ಸ್ಮಶಾನಗಳಿರುವುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸತ್ತ ನಂತರವೂ ಮನುಷ್ಯನನ್ನು ಜಾತಿಯ ಹೆಸರಿನಲ್ಲಿ ಪ್ರತ್ಯೇಕ ಮಾಡಿ ನೋಡುವುದು ಸರಿಯಲ್ಲ. ಈ ರೀತಿ ಜಾತಿಗೊಂದು ಸ್ಮಶಾನ ನೀಡುವ ಚಿಂತನೆಯನ್ನು ಸರಕಾರ ಕೂಡಲೇ ನಿಲ್ಲಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷದ ಉಪನಾಯಕ ಕೆ.ಬಿ.ಶಾಣಪ್ಪ, ಮುಸ್ಲಿಮರು, ಕ್ರೈಸ್ತರು ಹಾಗೂ ಹಿಂದೂಗಳಿಗೆ ಪ್ರತ್ಯೇಕವಾದ ಸ್ಮಶಾನಗಳಿವೆ. ಅಲ್ಲಿ, ದಲಿತ ಸಮುದಾಯದವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುತ್ತಾರೆಯೇ, ಉಗ್ರಪ್ಪನವರ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದಲಿತರಿಗೆ ಪ್ರತ್ಯೇಕವಾದ ಸ್ಮಶಾನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಒಂದು ಹಂತದಲ್ಲಿ ಮಾತಿನ ಚಕಮಕಿ, ಗದ್ದಲದ ವಾತಾವರಣ ಹೆಚ್ಚುತ್ತಿದ್ದಂತೆ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪ್ರಶ್ನೋತ್ತರ ಕಲಾದಲ್ಲಿ ಚರ್ಚೆ ಮಾಡಲು ಅವಕಾಶವಿಲ್ಲ. ಸಂವಿಧಾನ ಹಾಗೂ ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದರು.
ಮೋಟಮ್ಮ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನೋಟಿಸ್ ನೀಡಿದರೆ ಸದನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿಕೊಡುವುದಾಗಿ ಸಭಾಪತಿ ಹೇಳುವ ಮೂಲಕ ಚರ್ಚೆಗೆ ಅಂತ್ಯ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News