×
Ad

ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಆತ್ಮಹತ್ಯೆ

Update: 2016-07-05 13:11 IST

ಚಿಕ್ಕಮಗಳೂರು, ಜು.5: 10 ಲಕ್ಷ ರೂಪಾಯಿಗಾಗಿ ರೌಡಿಗಳನ್ನು ಬಿಟ್ಟು ಯುವಕನನ್ನು ಅಪಹರಣ ಮಾಡಲು ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ವಿಭಾಗದ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಮಂಗಳವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಬೆಳಗಾವಿ ಜಿಲ್ಲೆೆಯ ಸವದತ್ತಿ ತಾಲೂಕಿನ ಮುರಗೋಡದಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ವಸ್ತರಾಗಿದ್ದ ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆಸ್ಪತ್ರೆಯ ವೈದ್ಯರು ಕಲ್ಲಪ್ಪ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಚಿಕ್ಕಮಗಳೂರು ವಿಭಾಗದ ಡಿವೈಎಸ್ಪಿ ಕಲ್ಲಪ್ಪ ತನ್ನನ್ನು ಅಪಹರಣ ಮಾಡಿ 10 ಲಕ್ಷ ರೂ. ಪಡೆದಿದ್ದಾರೆ ಎಂದು ತೇಜಸ್ ಎಂಬ ಯುವಕ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಬಳಿಕ ಕಲ್ಲಪ್ಪ ತಲೆ ಮರೆಸಿಕೊಂಡಿದ್ದರು.

ಘಟನೆಯ ವಿವರ:

 ಜೂ.27ರಂದು ರಾತ್ರಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಇಸ್ಪಿಟ್ ಅಡ್ಡೆ ಮೇಲೆ ದಾಳಿ ನಡೆಸಿ ತೇಜಸ್ ಸೇರಿ 24 ಮಂದಿಯನ್ನು ಬಂಧಿಸಿದ್ದರು. ನಂತರ ಎಲ್ಲರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಳಿಕ ತೇಜಸ್‌ನನ್ನು ಜೂ.28 ರಂದು 7 ಮಂದಿ ಅಪರಿಚಿತರು ಬಸವನಹಳ್ಳಿ ನಿವಾಸದಿಂದ ಅಪಹರಿಸಿದ್ದರು. ಬಳಿಕ ಡಿವೈಎಸ್ಪಿ ಕಲ್ಲಪ್ಪ 10 ಲಕ್ಷ ರೂ. ತಲುಪಿಸುವಂತೆ ದೂರವಾಣಿ ಮೂಲಕ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ತೇಜಸ್ ತನ್ನ ಸ್ನೇಹಿತರ ಮೂಲಕ ಹಣ ಪಡೆದು ಡಿವೈಎಸ್ಪಿ ಕಲ್ಲಪ್ಪಗೆ ತಲುಪಿಸಿದ್ದರು. ಹಣ ನೀಡಿದ ಬಳಿಕ ತೇಜಸ್ ಅವರು ಕಲ್ಲಪ್ಪ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದಾಗ ಈ ವಿಷಯ ಬಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News