ಬಜರಂಗದಳ ಮುಖಂಡನ ಸಂಚಿಗೆ ಬಲಿಯಾದ ಯುವ ಡಿವೈಎಸ್ಪಿ
ಚಿಕ್ಕಮಗಳೂರು, ಜು.5: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ನಿಗೂಢ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಪ್ರಮುಖ ಸೂತ್ರಧಾರಿ ಭಜರಂಗ ದಳದ ಮುಖಂಡ ಪ್ರವೀಣ್ ಖಾಂಡ್ಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್, ಜೂಜಾಟ, ಫೈನಾನ್ಸ್ ದಂಧೆ ಸೇರಿದಂತೆ ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದ ಭಜರಂಗ ದಳದ ಮುಖಂಡನ ಸಂಚಿಗೆ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯ ಯುವ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ನಿಗೂಢ ರೀತಿಯಲ್ಲಿ ಬಲಿಯಾಗಿದ್ದಾನೆ.
ಪೊಲೀಸ್ ಇಲಾಖೆ ಉನ್ನತ ಅಧಿಕಾರಿಯಾಗುವ ಮೂಲಕ ಉತ್ತಮ ಜನಸೇವೆ ಮಾಡಬೇಕೆಂಬ ಇಚ್ಛೆಹೊಂದಿದ್ದ ಯುವ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆತನ ಪತ್ನಿ, ಮಗು ಹಾಗೂ ಪೋಷಕರು ಅನಾಥವಾಗಿರುವುದು ನಿಜಕ್ಕೂ ಶೋಚನೀಯ.
ಘಟನೆ ವಿವರ: ಅಂದರ್-ಬಾಹರ್ ಜೂಜಾಟ ಪ್ರಕರಣ ಸಂಬಂಧ ಪೊಲೀಸರ ಬಂಧನಕ್ಕೆ ಒಳಗಾಗಿ ಆ ಬಳಿಕ ಅಪಹರಣಕ್ಕೊಳಗಾದ ತೇಜಸ್‌ಗೌಡ, ಹಾಗೂ ಆತನನ್ನು ಅಪಹರಿಸಿದ ಮೂಡಿಗೆರೆ ಕಲ್ಮನೆ ಮೂಲದ ನಟರಾಜ್ ಮತ್ತು ಭಜರಂಗ ದಳದ ಮುಖಂಡ ಬಾಳೆಹೊನ್ನೂರು ಮೂಲದ ಪ್ರವೀಣ್ ಖಂಡ್ಯಾ ಮೂಲದಲ್ಲಿ ಒಂದೇ ಗ್ಯಾಂಗ್ ಎಂದು ಹೇಳಲಾಗಿದೆ. ಮಧ್ಯೆ ಕಿಕ್ರೆಟ್ ಬೆಟ್ಟಿಂಗ್ ವ್ಯವಹಾರ ಸಂಬಂಧ ತೇಜಸ್‌ಗೌಡ ಹಾಗೂ ನಟರಾಜ್ ನಡುವೆ ವೈಮನಸ್ಸು ಉಂಟಾಗುತ್ತದೆ. ವ್ಯವಹಾರಕ್ಕೆ ಸಂಬಂಧಪಟ್ಟಂತೆ ತೇಜಸ್‌ಗೌಡ, ನಟರಾಜ್‌ಗೆ 20 ಲಕ್ಷ ರೂ. ಹಣ ನೀಡಬೇಕಿರುತ್ತದೆ. ಈ ಹಣ ವಸೂಲಿಗೆ ಪ್ರವೀಣ್ ಖಂಡ್ಯಾ ಮಧ್ಯಸ್ಥಿಕೆ ವಹಿಸುತ್ತಾನೆಂಬುದು ಈ ಪ್ರಕರಣದಲ್ಲಿ ಗಮನಾರ್ಹ.ಬಳಿಕ ಪ್ರವೀಣ್ ಖಂಡ್ಯಾ, ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಮೂಲಕ ಆ ಹಣ ವಸೂಲಿ ಸಂಬಂಧ ಮಾತುಕತೆಯೂ ನಡೆದಿತ್ತು. ಈ ನಡುವೆ ಅಂದರ್-ಬಾಹರ್ ಜೂಜಾಟದ ಕೇಸಲ್ಲಿ ಜೂ.27ರಂದು ತೇಜಸ್‌ಗೌಡ ಸಿಕ್ಕಿ ಬೀಳುತ್ತಾನೆ. ಆತನಿಗೆ ನಟರಾಜ್‌ನೇ ಖುದ್ದು ಜಾಮೀನು ನೀಡಿ ಬಿಡುಗಡೆಗೊಂಡ ಬಳಿಕ ಅಪಹರಣದ ಕಥೆ ಹೆಣೆಯುತ್ತಾರೆಂಬ ಮಾಹಿತಿ ಸಿಕ್ಕಿದೆ.
ಹೊಸ ತಿರುವು: ತೇಜಸ್‌ಗೌಡನನ್ನು ಅಪಹರಿಸಿದ ನಟರಾಜ್ ಮತ್ತು ಭಜರಂಗ ದಳದ ಪ್ರವೀಣ್ ಖಂಡ್ಯಾ ಗುಂಪು ಆತನನ್ನು ಬೆಂಗಳೂರಿನ ಸಂಜಯನಗರದ ಶ್ವಾನಗಳ ಶೆಡ್‌ವೊಂದರಲ್ಲಿ ಕೂಡಿಹಾಕಿ, ತಮ್ಮ ಹಳೆಯ ಬಾಕಿ 20ಲಕ್ಷ ರೂ.ನೀಡದಿದ್ದರೆ ಕೊಲೆಗೈಯುವ ಬೆದರಿಕೆವೊಡ್ಡುತ್ತಿದ್ದರೆಂದು ಹೇಳಲಾಗಿದೆ. ಅಪಹರಣಕಾರರ ಹಿಂಸೆ ಸಹಿಸದೆ ತೇಜಸ್‌ಗೌಡ ಕೊನೆಗೆ 10 ಲಕ್ಷ ರೂ. ನೀಡಲು ಒಪ್ಪಿಕೊಂಡು ಸ್ನೇಹಿತನೊಬ್ಬನ ಮೂಲಕ ಹಣ ನೀಡಲು ಮುಂದಾಗುತ್ತಾನೆ. ಈ ಹಂತದಲ್ಲಿ ಪ್ರವೀಣ್ ಖಂಡ್ಯಾ, 10ಲಕ್ಷ ರೂ.ಹಣವನ್ನು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಮೂಲಕ ನೀಡಲು ಹೇಳಿ ಪೊಲೀಸ್ ಇಲಾಖೆ ಅಧಿಕೃತ ಮೊಬೈಲ್‌ಸಂಖ್ಯೆಯನ್ನೇ ನೀಡುತ್ತಾನೆ.ಸಂಖ್ಯೆಗೆ ಕರೆ ಮಾಡಿದ ತೇಜಸ್‌ಗೌಡ ಸ್ನೇಹಿತ, ‘ಹಣವನ್ನು ಯಾರಿಗೆ, ಎಲ್ಲಿಗೆ ತಲುಪಿಸಬೇಕು, ಎಷ್ಟು ಮೊತ್ತ’ ಎಂಬುದು ಸೇರಿದಂತೆ ಸಂಪೂರ್ಣ ಸಂಭಾಷಣೆಯನ್ನು ದಾಖಲಿಸಿಕೊಂಡಿದ್ದು, ಇದೀಗ ಮಾಧ್ಯಮಗಳಲ್ಲಿಯೂ ಅದು ಬಿತ್ತರಗೊಂಡಿದೆ. ಆ ಹಿನ್ನೆಲೆಯಲ್ಲಿ ಮನನೊಂದು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಜರಂಗ ದಳ ರೂಪಿಸಿದ ಸಂಚಿಗೆ ಡಿವೈಎಸ್ಪಿ ಬಲಿಯಾಗಿರುವುದು ಸ್ಪಷ್ಟವಾಗಿದೆ.
ಡಿವೈಎಸ್ಪಿ ಹಿನ್ನೆಲೆ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ ಕಲ್ಲಪ್ಪ ಹಂಡಿಭಾಗ್, ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆಯುವ ಮೂಲಕ 2012ರಲ್ಲಿ ಡಿವೈಎಸ್ಪಿಯಾಗಿ ಪೊಲೀಸ್ ಇಲಾಖೆ ಸೇವೆಗೆ ಸೇರಿದ್ದರು.ಧಾರವಾಡದಲ್ಲಿ 2 ವರ್ಷ ಸೇವೆ ಸಲ್ಲಿಸಿದ ಬಳಿಕ 2014ರ ಡಿಸೆಂಬರ್‌ನಲ್ಲಿ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಮೂರು ವರ್ಷದ ಹಿಂದೆ ವಿದ್ಯಾ ಎಂಬವರನ್ನು ಡಿವೈಎಸ್ಪಿ ಕಲ್ಲಪ್ಪ ಮದುವೆಯಾಗಿದ್ದು, ದಂಪತಿಗೆ ಒಂದು ಗಂಡು ಮಗುವೂ ಇದೆ. ಮುರಗೋಡು ಗ್ರಾಮದಲ್ಲಿನ ತಮ್ಮ ನಿವಾಸದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ನಿಗೂಢ ರೀತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ರವಾನಿಸಲಾಗಿದೆ.