ಕಾರವಾರದಲ್ಲಿ ಹೆಚ್ಚಿದ ಕಡಲ್ಕೊರೆತ: ಆತಂಕದಲ್ಲಿ ಜನತೆ
ಕಾರವಾರ, ಜು.5: ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮುದ್ರ ಕಿನಾರೆಯಲ್ಲಿರುವ ದಾಂಡೇಬಾಗ, ಬಾವಳ, ಹಿಪಳಿ, ನಚಿಕನ್‌ಬಾಗ ಗ್ರಾಮಸ್ಥರು ಸಮುದ್ರ ಕೊರೆತದಿಂದ ಪ್ರತಿ ದಿನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಈ ಬಾರಿ ಕಡಲ ಅಬ್ಬರ ದ್ವಿಗುಣವಾಗಿದ್ದು, ಒಂದು ತಿಂಗಳ ಮಳೆಗೆ ನಾಲ್ಕೈದು ಮೀಟರ್‌ಗಳಷ್ಟು ತೀರ ಕೊಚ್ಚಿ ಹೋಗಿದೆ. ಕಡಲ ತಡಿಯಲ್ಲಿರುವ ಗಾಳಿ ಗಿಡಗಳನ್ನು ನುಂಗಿಕೊಂಡು ಸಮುದ್ರ ಮುಂದೆ ಬರಲಾರಂಭಿಸಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ದಾಂಡೇಬಾಗದಲ್ಲಿ ರಸ್ತೆಯ ಕಲ್ಲುಗಳು ಕಿತ್ತು ಬೀಳುತ್ತಿದ್ದು ಸಮುದ್ರ ಕೊರೆತ ಮುಂದುವರಿದರೆ ಒಂದೆರಡು ದಿನದಲ್ಲಿ ರಸ್ತೆ ಸಂಚಾರ ಬಂದಾಗುವ ಸಾಧ್ಯತೆ ಇದೆ. ಈ ಗ್ರಾಮದ ನೂರಾರು ವಿದ್ಯಾರ್ಥಿಗಳು ಕಾರವಾರ-ಮಾಜಾಳಿ- ದಾಂಡೇಬಾಗ-ಬಾವಳ ಬಸ್‌ನಲ್ಲಿ ಓಡಾಟ ನಡೆಸುತ್ತಾರೆ. ರಸ್ತೆ ಬಂದಾದರೆ ನೂರಾರು ಮಕ್ಕಳಿಗೆ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.
ದಾಂಡೇಬಾಗದಲ್ಲಿ ಸಮುದ್ರ ಕೊರೆತಕ್ಕೆ 50 ಕ್ಕೂ ಹೆಚ್ಚು ಶೆಡ್‌ಗಳು ಆತಂಕದಲ್ಲಿವೆ. ಕಡಲ ಅಬ್ಬರ ಮುಂದುವರಿದರೆ ದೋಣಿಗಳನ್ನು ಇಡಲು ಮೀನುಗಾರರು ಪರದಾಡುವ ಪರಿಸ್ಥಿತಿ ಎದುರಾಗಲಿದೆ.
ಸೋಮವಾರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬಂದರು ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಪಂಚಾಯತ್ ಸದಸ್ಯ ರವೀಂದ್ರ ಪವಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೀತಲ್ ಪವಾರ್, ಸದಸ್ಯರಾದ ಅನಿಲ ಮಾಜಾಳಿಕರ್, ನಿಷಾ ಮಾಜಾಳಿಕರ್, ಪಿಡಿಒ ಭಾರತಿ ಕಾಂಬ್ಳೆ, ನಾಗರಿಕರಾದ ದೀಪಕ್ ಗಡಕರ್, ಆನಂದು ಸೈಲ್, ರಾಜಾ ಬಾಂದೇಕರ್ ಇತರರು ಇದ್ದರು.
ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡಲ ತಡಿಯಲ್ಲಿ 500 ಕ್ಕೂ ಹೆಚ್ಚು ಮೀನುಗಾರರ ಮನೆಗಳಿವೆ. ಸಮುದ್ರ ಪಕ್ಕದಲ್ಲಿ ದೋಣಿ ಇಡಲು ಮೀನುಗಾರರು ಗುಡಿಸಲು ಕಟ್ಟಿಕೊಂಡಿದ್ದಾರೆ. ಇದುವರೆಗೆ ತೀರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಾತ್ರ ಸಮುದ್ರ ಕೊರೆತ ತಡೆಯಲು ಬಂಡೆಕಲ್ಲು ಹಾಕಲಾಗಿದೆ. ಬಂಡೆ ಕಲ್ಲು ಹಾಕಿ ತಡೆಗೋಡೆ ನಿರ್ಮಾಣ ಮಾಡದ ಸ್ಥಳಗಳಲ್ಲಿ ಈ ವರ್ಷ ಕೊರೆತ ಪ್ರಾರಂಭವಾಗಿದೆ. ತಕ್ಷಣ ತಡೆಗೋಡೆ ನಿರ್ಮಾಣ ಮಾಡಲು ಅಷ್ಟು ಅನುದಾನ ನಮ್ಮ ಬಳಿ ಇಲ್ಲ. ನಾವು ಸದ್ಯ ಕ್ರಿಯಾ ಯೋಜನೆ ಮಾಡಿ ಸರಕಾರಕ್ಕೆ ನೀಡುತ್ತೇವೆ. ಸರಕಾರದಿಂದ ಹಣ ಮಂಜೂರಾದ ನಂತರವೇ ಕಾಮಗಾರಿ ಮಾಡಲು ಸಾಧ್ಯ ಎನ್ನುತ್ತಾರೆ ಬಂದರು ಇಲಾಖೆಯ ಕಾರ್ಯನಿವಾಹಕ ಇಂಜಿನಿಯರ್ ಕುಮಾರ್.
ಈ ಬಗ್ಗೆ ಮಾಜಾಳಿಯ ಗ್ರಾಪಂ ಅಧ್ಯಕ್ಷೆ ಶೀತಲ್ ಪವಾರ್ ಬಳಿ ವಿಚಾರಿಸಿದಾಗ ಸಮುದ್ರ ಕೊರೆತ ತಡೆಗೆ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆ ಸಂಚಾರ ಬಂದಾಗುತ್ತದೆ. ನೂರಾರು ಮೀನುಗಾರರ ಗುಡಿಸಲುಗಳು ಸಮುದ್ರಕ್ಕೆ ಆಹುತಿಯಾಗುತ್ತವೆ. ಈ ಕುರಿತು ಜಿಲ್ಲಾಡಳಿತ ತುರ್ತು ಕಾರ್ಯಾಚರಣೆಗೆ ಮುಂದಾಗಿ ಜನರ ರಕ್ಷಣೆ ಅವರ ಆಸ್ತಿಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.