ಅಕ್ರಮ ಮದ್ಯ ಮಾರಾಟ: ಮೂವರ ಬಂಧನ
ಶಿವಮೊಗ್ಗ,ಜು.5 : ಜಿಲ್ಲೆಯ ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಮದ್ಯ ಮಾರಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿ, ಸಾವಿರಾರು ರೂ.ವೌಲ್ಯದ ಮದ್ಯ ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಶಿವಮೊಗ್ಗ ವರದಿ: ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಮನೆಯ ಮುಂಭಾಗಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸರಿಸುಮಾರು 3,600 ರೂ. ವೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪರಾಧ ವಿಭಾಗದ ವಿಶೇಷ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಶಿಕಾರಿಪುರ ವರದಿ: ತಾಲೂಕಿನ ಎಂಸಿಆರ್‌ಪಿ ಕಾಲನಿ ಗ್ರಾಮದಲ್ಲಿ ಬೈಕ್‌ವೊಂದರಲ್ಲಿ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ಸುಮಾರು 3,105 ರೂ. ವೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.