×
Ad

ದಲಿತರ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯ

Update: 2016-07-05 23:30 IST

ಮಡಿಕೇರಿ, ಜು.5: ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯದ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದ್ದು, ಪೊಲೀಸರು ಸಕಾಲದಲ್ಲಿ ದಲಿತ ಕಾಲನಿಗಳಲ್ಲಿ ಕುಂದು ಕೊರತೆ ಸಭೆೆ ನಡೆಸಿದಲ್ಲಿ ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಮೊಗೇರ ಸೇವಾ ಸಮಾಜದ ಬೆಟ್ಟಗೇರಿ ಮೊಗೇರ ಗ್ರಾಮ ಸಮಿತಿಯ ವತಿಯಿಂದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರ ಸಹಯೋಗದೊಂದಿಗೆ ಬೆಟ್ಟಗೆರಿ ಗ್ರಾಪಂಗೆ ಒಳಪಡುವ ಪರಿಶಿಷ್ಟ ಜಾತಿ ಸಮುದಾಯದ ಕುಂದುಕೊರತೆ ಸಭೆೆಯು ಬೆಟ್ಟಗೆರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
   ಸಭೆೆಯನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಂ.ರವಿ, ದಲಿತ ಸಮುದಾಯದ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಪೊಲೀಸರ ಸಹಕಾರ ಅಗತ್ಯವಾಗಿದೆ ಎಂದರು. ದಲಿತ ಕಾಲನಿಗಳಲ್ಲಿ ಪೊಲೀಸ್ ಇಲಾಖೆ ಮೂಲಕ ಕುಂದು ಕೊರತೆ ಪರಿಶೀಲನಾ ಸಭೆೆ ನಡೆಸಿದಲ್ಲಿ ಅಸಹಾಯಕರಿಗೆ ಆತ್ಮ ವಿಶ್ವಾಸ ಮತ್ತು ಧೈರ್ಯ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಪೊಲೀಸರು ಖುದ್ದು ಕುಂದುಕೊರತೆಯನ್ನು ಆಲಿಸುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ರವಿ ತಿಳಿಸಿದರು.
ಬೆಟ್ಟಗೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಸಮುದಾಯದವರು ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದು, ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದಾರೆ. ಕಳೆದ 30 ವರ್ಷಗಳಿಂದ ಲೈನ್ ಮನೆಗಳಲ್ಲೇ ವಾಸಿಸುತ್ತಿದ್ದು, ನಿವೇಶನ ರಹಿತರಾಗಿದ್ದಾರೆ. ಇಂತಹವರಿಗೆ ಪಂಚಾಯತ್ ವತಿಯಿಂದ ನಿವೇಶನ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು. ಈ ಭಾಗದಲ್ಲಿ ಸಾರ್ವಜನಿಕ ಸ್ಮಶಾನವೂ ಇಲ್ಲದಾಗಿದ್ದು, ದೂರದ ಮಡಿಕೇರಿಯ ಸ್ಮಶಾನವನ್ನೇ ಗ್ರಾಮಸ್ಥರು ಅವಲಂಬಿಸಬೇಕಾಗಿದೆ. ಆದ್ದರಿಂದ ಸ್ಥಳೀಯ ಗ್ರಾಪಂ ಸ್ಮಶಾನದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ಪಿ.ಎಂ.ರವಿ ಒತ್ತಾಯಿಸಿದರು.
ದಲಿತರ ಮೇಲೆ ದೌರ್ಜನ್ಯ ನಡೆದರೆ ತಕ್ಷಣ ಠಾಣೆಗೆ ಹಾಜರಾಗಿ ದೂರು ನೀಡಿದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ನಡೆಯುವ ಕುಂದು ಕೊರತೆ ಸಭೆೆಯಲ್ಲಿ ಕೂಡ ಪಾಲ್ಗೊಂಡು ತಮಗಾದ ಅನ್ಯಾಯವನ್ನು ಧೈರ್ಯವಾಗಿ ತಿಳಿಸುವಂತೆ ಠಾಣಾಧಿಕಾರಿ ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶಾಂತಿ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನ ನೀಡುವುದು ಮತ್ತು ಸ್ಮಶಾನಕ್ಕೆ ಜಾಗ ಗುರುತಿಸುವ ಬಗ್ಗೆ ಮುಂದಿನ ಗ್ರಾಪಂ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಸಭೆೆಯ ಅಧ್ಯಕ್ಷತೆಯನ್ನು ಬೆಟ್ಟಗೆರಿ ಮೊಗೇರ ಸಮಾಜದ ಗ್ರಾಮ ಸಮಿತಿ ಅಧ್ಯಕ್ಷ ಎಂ.ಜಿ.ಜನಾರ್ದನ ವಹಿಸಿದ್ದರು.
ಗ್ರಾಪಂ ಸದಸ್ಯೆ ಕಮಲಾ ಉತ್ತಯ್ಯ, ಮಾಜಿ ಸದಸ್ಯ ಮನಮೋಹನ್ ರೈ, ಮೊಗೇರ ಸಮಾಜದ ಜಿಲ್ಲಾ ಸಂಚಾಲಕ ಪಿ.ಬಿ.ಜನಾದರ್ನ್, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಬಿ.ಸುರೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ದೇವಕಿ ಹಾಗೂ ಮೊಗೇರ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News