×
Ad

ಕೇಂದ್ರ ಮೋಟಾರ್ ವಾಹನ ನಿಯಮಾವಳಿ ತಿದ್ದುಪಡಿ

Update: 2016-07-05 23:32 IST

ಸಾಗರ, ಜು.5: ಕೇಂದ್ರ ಮೋಟಾರ್ ವಾಹನ ನಿಯಮಾವಳಿ 1989ಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದೆ. ಈ ತಿದ್ದುಪಡಿ ಅನ್ವಯ ವಾಹನಗಳಿಗೆ ಪ್ರತಿಫಲಿಸುವ ಟೇಪನ್ನು ವಾಹನದ ಹಿಂಭಾಗ ಮತ್ತು ಮುಂಭಾಗದಲ್ಲಿ ಅಂಟಿಸುವುದು ಕಡ್ಡಾಯವಾಗಿರುತ್ತದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ನಗರವ್ಯಾಪ್ತಿಯಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಮಂಗಳವಾರ ಪ್ರತಿಫಲಿಸುವ ಟೇಪ್ ಹಚ್ಚುವ ಜಾಗೃತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಈಗಾಗಲೇ ಎಲ್ಲ ವಾಹನಗಳ ಮಾಲಕರು ಮತ್ತು ಚಾಲಕರಿಗೆ ಪ್ರತಿಫಲಿಸುವ ಟೇಪ್ ಅಂಟಿಸಿಕೊಳ್ಳುವ ಕುರಿತು ಅಂತಿಮ ತಿಳುವಳಿಕೆ ನೀಡಲಾಗಿದೆ. ವಾಹನ ಮುಂಭಾಗದಲ್ಲಿ ಬಿಳಿ ಹಾಗೂ ಹಿಂಭಾಗದಲ್ಲಿ ಕೆಂಪು ಬಣ್ಣದ ಪ್ರತಿಫಲಿಸುವ ಟೇಪ್ ಹಚ್ಚುವುದು ಕಡ್ಡಾಯ ಎಂದರು. ರಾತ್ರಿಯ ವೇಳೆ ನಡೆಯುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ನಿಯಮ ಉಲ್ಲಂಘನೆ ಮಾಡಿದಲ್ಲಿ ಮೊದಲ ಬಾರಿ 100 ರೂ. ನಂತರದಲ್ಲಿ 300 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ವಾಹನ ಸವಾರರು ಹಾಗೂ ಮಾಲಕರು ತಮ್ಮ ಜೀವ ರಕ್ಷಣೆ ಹಾಗೂ ವಾಹನ ಸುರಕ್ಷತೆ, ಅಪಘಾತರಹಿತ ಚಾಲನೆಗಾಗಿ ಇಲಾಖೆಯ ನಿಯಮವನ್ನು ಪಾಲಿಸಬೇಕು ಎಂದು ಕರೆ ನೀಡಿದ್ದಾರೆ. ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಶಾಲಾ ವಾಹನಗಳ ಬಗ್ಗೆ ನಿಗಾ ವಹಿಸಲಾಗಿದೆ. ಮಕ್ಕಳನ್ನು ಶಾಲಾವಾಹನಗಳಲ್ಲಿ ಕಳುಹಿಸುವಾಗ ಪೋಷಕರು ನಿಗಾ ವಹಿಸುವ ಜೊತೆಗೆ ಚಾಲಕರು ಸಹ ನಿಗದಿತ ಆಸನಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಒತ್ತೊತ್ತಾಗಿ ತುಂಬಿಕೊಂಡು ಹೋಗಬಾರದು. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ ಎಂದರು. ಈಗಾಗಲೇ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಶಾಲಾ ವಾಹನ ಮಾಲಕರ, ಚಾಲಕರ ಸಭೆಯನ್ನು ಕರೆದು ಅವರಿಗೆ ಸೂಕ್ತ ಸೂಚನೆಯನ್ನು ನೀಡಲಾಗಿದೆ. ಜೊತೆಗೆ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳ ಮೇಲೆ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಲಾಗಿದೆ ಎಂದರು. ಈ ಸಂದರ್ಭ ಸಿಬ್ಬಂದಿಯಾದ ರತ್ನಾಕರ್, ಪವನ್‌ಕುಮಾರ್, ಸಂತೋಷ್ ಕುಮಾರ್, ವೆಂಕಟೇಶ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News