×
Ad

ಚಲಿಸುತ್ತಿದ್ದ ಕಾರಿನ ಹ್ಯಾಂಡ್‌ಬ್ರೇಕ್ ಎಳೆದ ಮಗು: ಅಪಘಾತ; ಮಗು ಮೃತ್ಯು

Update: 2016-07-05 23:39 IST

ಮುದ್ದೇಬಿಹಾಳ, ಜು.5: ವೇಗವಾಗಿ ಚಲಿಸುತ್ತಿದ್ದ ಹೋಂಡಾಸಿಟಿ ಕಾರಿನಲ್ಲಿದ್ದ ಮೂರು ವರ್ಷದ ಮಗು ಹ್ಯಾಂಡ್‌ಬ್ರೇಕ್ ಎಳೆದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ, ಎದುರಿಗೆ ಬಂದ ಬೈಕ್‌ಗೆ ಗುದ್ದಿದ್ದೂ ಅಲ್ಲದೆ ರಸ್ತೆ ಪಕ್ಕದ ಮೈಲುಗಲ್ಲು, ಮರಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಆಲಮಟ್ಟಿ ರಸ್ತೆಯ ಗೆದ್ದಲಮುರಿ ಗ್ರಾಮದಲ್ಲಿ ಸಂಭವಿಸಿದೆ.

 ಘಟನೆಯಿಂದಾಗಿ ಮಗು ರಾಹೀಲ್(3) ಸ್ಥಳದಲ್ಲೇ ಸಾವನ್ನಪ್ಪಿದೆ. ತೀವ್ರ ಗಾಯಗೊಂಡಿರುವ ಮಗುವಿನ ತಾಯಿ, ಯಾದಗಿರಿ ಜಿಲ್ಲೆ ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ವೀಣಾ ಸರನಾಡಗೌಡರ ಸ್ಥಿತಿ ಚಿಂತಾಜನಕವಾಗಿದೆ. ಬೈಕ್‌ನಲ್ಲಿದ್ದ ಹಂದ್ರಾಳ ಗ್ರಾಮದ ರಾಹುಲ್ ಕಟ್ಟಿಮನಿ, ಗೆದ್ದಲಮರಿ ಗ್ರಾಮದ ದಂಡೆಪ್ಪಮುರಾಳ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಮಗುವಿನ ತಂದೆ ಔಷಧ ವ್ಯಾಪಾರಿ ಏಜಾಜ್ ಅಹ್ಮದ್ ಚಟ್ಟರಕಿ ಗಂಭೀರ ಗಾಯಗೊಂಡಿದ್ದಾರೆ.

ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಕಕ್ಕೇರಾ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯೆಯಾಗಿರುವ ಡಾ.ವೀಣಾ ಸರನಾಡಗೌಡರ ಅವರದ್ದು ಅಂತರ್‌ಧರ್ಮಿಯ ಪ್ರೇಮ ವಿವಾಹ. ಪತಿ, ಔಷಧ ವ್ಯಾಪಾರಿ ಏಜಾಜ್ ಅಹ್ಮದ್ ಚಟ್ಟರಕಿ ವಿಜಯಪುರ ನಗರದವರು. ಗುರುವಾರ ಈದ್ ಹಬ್ಬವನ್ನು ವಿಜಯಪುರದ ಮನೆಯಲ್ಲಿ ಆಚರಿಸುವುದಕ್ಕಾಗಿ ಕಕ್ಕೇರಾದ ಬಾಪೂಜಿ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ಮಗ ರಾಹೀಲ್, ಪತ್ನಿ ಡಾ.ವೀಣಾ ಅವರನ್ನು ಏಜಾಜ್ ತನ್ನ ಕಾರಿನಲ್ಲಿ ಕರೆದುಕೊಂಡು ವಿಜಯಪುರಕ್ಕೆ ಹೊರಟಿದ್ದರು.

ಮಾರ್ಗಮಧ್ಯೆ ಆಲಮಟ್ಟಿ ರಸ್ತೆಯ ಗೆದ್ದಲಮರಿ ಗ್ರಾಮದ ಹೊರವಲಯದಲ್ಲಿ ಕಾರು ಮುಗ್ಗರಿಸಿದಂತಾಗಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಜೋರಾಗಿ ಗುದ್ದಿದೆ. ಈ ರಭಸಕ್ಕೆ ಬೈಕ್ ನಲ್ಲಿದ್ದ ಯುವಕರಿಬ್ಬರೂ ಡಾಂಬರು ರಸ್ತೆಯ ಮೇಲೆ ಕೆಲದೂರ ಜಾರಿಕೊಂಡು ಹೋಗಿದ್ದಾರೆ. ಬೈಕು ರಸ್ತೆಪಕ್ಕದ ಹೊಲದಲ್ಲಿ ಪಲ್ಟಿಯಾಗಿ ಬಿದ್ದಿದೆ. ಕಾರು ಕೂಡ ಮೈಲುಗಲ್ಲು, ಮರಕ್ಕೆ ಢಿಕ್ಕಿ ಹೊಡೆದು ನುಜ್ಜುಗುಜ್ಜಾಗಿದೆ. ಚಾಲಕನ ಸೀಟಿನ ಮುಂಬಾಗದ ಸ್ಟೇರಿಂಗ್‌ನಲ್ಲಿ ಬಲೂನ್ ಅಪಘಾತದ ರಭಸಕ್ಕೆ ಬಿಚ್ಚಿಕೊಂಡು ಚಾಲಕ ಏಜಾಜ್ ಅಹ್ಮದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುರಂತದ ಮಾಹಿತಿ ಪಡೆದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆರೋಗ್ಯ ಕವಚ ಆಂಬ್ಯುಲೆನ್ಸ್ಸ್‌ನಲ್ಲಿ ಗಾಯಾಳುಗಳನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು. ಗಾಯಾಳುಗಳ ಪೈಕಿ ಮಗುವಿನ ತಾಯಿ ಗಂಭೀರ ಸ್ಥಿತಿಯಲ್ಲಿದ್ದರೂ ನನ್ನ ಮಗುಗೆ ಏನಾಗಿದೆ, ಆರಾಮಾಗಿದೆಯಲ್ಲ ಎಂದು ಬಡಬಡಿಸುತ್ತಿದ್ದದ್ದು ಕರುಳು ಕಿವುಚುವಂತಿತ್ತು.

ಡಿವೈಎಸ್ಪಿ ಪ್ರಭುಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು. ಪಿಎಸೈ ಪರಶುರಾಮ ಮನಗೂಳಿ ಬೈಕ್ ಸವಾರ ರಾಹುಲ್ ಕಟ್ಟಿಮನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News