ಸ್ವಾಮಿ ಜಿತಕಾಮಾನಂದರ ಈದ್ ಸಂದೇಶ
ಉಪವಾಸ ಶಾರೀರಿಕ ಮತ್ತು ಮಾನಸಿಕ ಪರಿಶುದ್ಧಿಗೆ ,ಆತ್ಮಶುದ್ಧಿಗಾಗಿ ಪೂರಕವಾದ ಹಾಗೂ ಸ್ವಯಂ ನಿಯಂತ್ರಣಕ್ಕೆ ಕಾರಣವಾಗುವ ಆಚರಣೆ. ನಾವು ಏಕಾದಶಿ, ಶಿವರಾತ್ರಿಯ ಸಂದರ್ಭದಲ್ಲಿ ಉಪವಾಸ ವ್ರತಗಳನ್ನು ಕೈಗೊಳ್ಳುತ್ತೇವೆ. ಪವಿತ್ರ ರಮಝಾನ್ ತಿಂಗಳ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಕೈಗೊಳ್ಳುವ ಉಪವಾಸ ಆಚರಣೆಗೂ ಅವರದೇ ಆದ ಧಾರ್ಮಿಕ ಮಹತ್ವವಿದೆ. ಅಂತಿಮವಾಗಿ ಎಲ್ಲರೂ ನೆಮ್ಮದಿಯಿಂದ ಬಾಳ ಬೇಕಾಗಿರುವುದು ಮುಖ್ಯ.
ಯಾವುದೇ ಜಾತಿ -ಧರ್ಮಗಳ ಜನರ ನಡುವೆ ಪರಸ್ಪರ ಗೌರವ, ಪರಸ್ಪರ ನಂಬಿಕೆಗಳು ಮುಖ್ಯ.ಅಪನಂಬಿಕೆ ಬೆಳೆಯಬಾರದು. ಪರಸ್ಪರ ಸಾಮರಸ್ಯದ ವಾತಾವರಣ ಸಮಾಜದ ವಿವಿಧ ಜಾತಿ, ಧರ್ಮದ ಜನರ ನಡುವೆ ಇರಬೇಕಾಗಿರುವುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಭಗವಂತನ ಸೇವೆ ಎಂದು ತಿಳಿದು ಮಾಡುವುದು ಪವಿತ್ರ ಕೆಲಸ.
ಸ್ವಾಮಿ ವಿವೇಕಾನಂದರು ನೀಡಿದ ಸಂದೇಶದಲ್ಲಿ ವಿಶ್ವ ಭ್ರಾತೃತ್ವದ ಸಂದೇಶ ನೀಡಿದ್ದಾರೆ.ಎಲ್ಲಾ ಧರ್ಮದ ಜನರ ಭಾವನೆಗಳನ್ನು ಗೌರವಿಸಲು ಸಂದೇಶ ನೀಡಿದ್ದಾರೆ. ಅವರು ತಮ್ಮ ಚಿಕಾಗೋ ಭಾಷಣದಲ್ಲೂ ಅದನ್ನೇ ಒತ್ತಿ ಹೇಳಿದ್ದಾರೆ. ಸಂಕುಚಿತ ಭಾವನೆಯನ್ನು ತೊರೆದು ವಿಶಾಲವಾದ ಮನೋಭಾವನೆಯೊಂದಿಗೆ ಬದುಕಬೇಕಾಗಿರುವ ಅಗತ್ಯ ನಮ್ಮೆಲ್ಲರಿಗೂ ಇದೆ. ಯಾವುದೇ ಧರ್ಮದಲ್ಲಿಯಾದರೂ ನಮ್ಮ ಒಳಿತಿಗಾಗಿ ನೀಡಿರುವ ಸಂದೇಶವನ್ನು ಸ್ವೀಕರಿಸೋಣ,ಅದನ್ನು ಗೌರವಿಸೋಣ,ದೇವರೊಬ್ಬನೆ ನಾಮ ಹಲವು ಎಂಬಂತೆ ನಮ್ಮೆಲ್ಲರ ಅಂತಿಮ ಗುರಿ ಎಲ್ಲರ ಒಳಿತನ್ನು ಬಯಸುವುದು, ದೀನರಿಗೆ, ದುರ್ಬಲರಿಗೆ ಕೈಲಾಗುವ ಸಹಾಯ ಮಾಡುವುದು ಅದೇ ಭಗವಂತನ ಸೇವೆ ಎಂದು ಪರಿಗಣಿಸಬೇಕು.
ಈ ರೀತಿಯಲ್ಲಿ ಸಾಗಲು ಜಗತ್ತಿನ ಬೇರೆ ಬೇರೆ ಧರ್ಮಗಳಲ್ಲಿ ಹಲವು ಸತ್ಕರ್ಮಗಳಿವೆ. ರಮಝಾನ್ ತಿಂಗಳ ಉಪವಾಸ ಹಾಗೂ ನಂತರದ ಈದುಲ್ ಫಿತ್ರ್ ಈ ರೀತಿಯ ಸತ್ಕರ್ಮಗಳಿಗೊಂದು ಉದಾಹರಣೆ. ಜಗತ್ತಿನ ಎಲ್ಲಾ ಜನರು ಪರಸ್ಪರ ಸಹೋದರರಂತೆ ಪರಸ್ಪರ ಗೌರವದೊಂದಿಗೆ, ವಿಶ್ವಾಸದೊಂದಿಗೆ ಬಾಳಬೇಕೆನ್ನುವುದು ಸ್ವಾಮಿ ವಿವೇಕಾನಂದರ ಬದುಕಿನ ಸಂದೇಶ. ರಮಝಾನ್ ನಮ್ಮೆಲ್ಲರ ನಡುವಿನ ಸೌಹಾರ್ದದ ಸಂಕೇತವಾಗಲಿ ಎಂದು ಶುಭಹಾರೈಸುತ್ತೇನೆ.