ಐಐಟಿ ತಲುಪಿದ ಬೀದರ್‌ನ ಬುಡಕಟ್ಟು ಹುಡುಗರು
ಬೀದರ್, ಜು.6: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯೆಂದು ಗುರುತಿಸಲ್ಪಟ್ಟ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲೂ ಸಮಾಧಾನಕರ ಫಲಿತಾಂಶ ತಂದಿಲ್ಲ. ಇದಕ್ಕೆ ಅಪವಾದವೆಂಬಂತೆ ಈ ಜಿಲ್ಲೆಯ ಇಬ್ಬರು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಪ್ರತಿಷ್ಠಿತ ಐಐಟಿಗೆ ಪ್ರವೇಶ ಪಡೆದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ದೀಪಕ್ ಕುಮಾರ್ ದತ್ತಾತ್ರಿ ಹಾಗೂ ಸಂದೀಪ್ ಹನುಮಂತ್ ಗೊಗ್ಗ ಇವರೇ ಬಿ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆದ ಈ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು. ಇಬ್ಬರೂ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ದೀಪಕ್ ಐಐಟಿ ಖರಗಪುರದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದ್ದರೆ, ಸಂದೀಪ್ ಐಐಟಿ ಮದ್ರಾಸ್‌ನಲ್ಲಿ ಕಲಿಯಲು ನಿರ್ಧರಿಸಿದ್ದಾನೆ.
ದೀಪಕ್ ತಂದೆ ದತ್ತಾತ್ರಿ ಬಿಎಸ್ಸೆಫ್ ಯೋಧನಾಗಿದ್ದು ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುಟುಂಬ ಬಸವಕಲ್ಯಾಣ ತಾಲೂಕಿನ ಗಡ್ಲೆಗಾವ್-ಬುಜುರ್ಗ್ ಗ್ರಾಮದ ನಿವಾಸಿಯಾಗಿದೆ. ಈ ಹಿಂದೆ ತನ್ನ ತಂದೆ ಜಮ್ಮು ಕಾಶ್ಮೀರ, ರಾಜಸ್ಥಾನ ಹಾಗೂ ತ್ರಿಪುರಾದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿ ಶಿಕ್ಷಣ ಪಡೆದಿದ್ದ ದೀಪಕ್‌ನಂತ ಬೀದರ್ ಏರ್‌ಫೋರ್ಸ್ ಸ್ಟೇಶನ್‌ನ ಸಮೀಪವಿರುವ ಕೇಂದ್ರೀಯ ವಿದ್ಯಾಲಯಕ್ಕೆ ಸೇರ್ಪಡೆಗೊಡಿದ್ದ. ಆತನಿಗೆ ಬಯೋಟೆಕ್ ಹಾಗೂ ಬಯೋಕೆಮಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವಾಸೆ.
ಶಕುಂತಳಾ ಪಾಟೀಲ್ ಶಾಲೆ ಹಾಗೂ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಶಿಕ್ಷಣ ಪಡೆದಿರುವ ಸಂದೀಪ್ ಮುಂದೆ ಏರೋನಾಟಿಕ್ಸ್ ವಿಷಯದಲ್ಲಿ ಶಿಕ್ಷಣ ಮುಂದುವರಿಸುವ ಉದ್ದೇಶ ಹೊಂದಿದ್ದಾನೆ. ‘‘ನನಗೆ ಮೆಟೀರಿಯಲ್ ಸೈನ್ಸ್‌ನಲ್ಲಿ ಪ್ರವೇಶ ದೊರೆಯಬಹುದು. ಮುಂದೆ ನಾನು ಸಾಧ್ಯವಾದಲ್ಲಿ ಏರೋನಾಟಿಕ್ಸ್ ಆಯ್ದುಕೊಳ್ಳುತ್ತೇನೆ’’ ಎಂದು ಸಂದೀಪ್ ಹೇಳುತ್ತಾನೆ.
ಆತನ ತಂದೆ ಹನುಮಂತ ಬಸವಕಲ್ಯಾಣ ಗ್ರಾಮದಲ್ಲಿ ಹಾಲು ಮಾರಾಟಗಾರರಾಗಿದ್ದು ಮಗನ ಶಿಕ್ಷಣ ಶುಲ್ಕ 5.5 ಲಕ್ಷ ರೂ. ಭರಿಸುವ ಶಕ್ತಿ ಅವರಿಗಿಲ್ಲ. ‘‘ನಾನು ದಾನಿಗಳ ಸಹಾಯ ಯಾಚಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರನ್ನು ಸಂಪರ್ಕಿಸಲು ಕೆಲವರು ಸಲಹೆ ನೀಡಿದ್ದಾರೆ. ಅವರನ್ನು ನಾನು ಇನ್ನಷ್ಟೇ ಭೇಟಿಯಾಗಬೇಕಿದೆ’’ ಎಂದು ಹೇಳುತ್ತಾರೆ ಆತ.
courtesy : The Hindu