ವೀಸಾ ಅವಧಿ ಮುಗಿದ 1,500 ಆಫ್ರಿಕನ್ ವಿದ್ಯಾರ್ಥಿಗಳಿಗೆ ಗಡೀಪಾರು ಭೀತಿ

Update: 2016-07-06 07:42 GMT

ಬೆಂಗಳೂರು, ಜು.6: ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲಿ ವಾಸಿಸುತ್ತಿರುವ 1500 ಆಫ್ರಿಕನ್ ಪ್ರಜೆಗಳ ಪಟ್ಟಿಯನ್ನು ಬೆಂಗಳೂರು ಪೊಲೀಸರು ಸಿದ್ಧಪಡಿಸಿದ್ದು ಇವರನ್ನೆಲ್ಲಾ ಜುಲೈ ಅಂತ್ಯದೊಳಗೆ ದೇಶದಿಂದ ಹೊರ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಡ್ರಗ್ಸ್ ಜಾಲದಲ್ಲಿ ಕೆಲ ಆಫ್ರಿಕನ್ ಪ್ರಜೆಗಳು ಸಿಕ್ಕಿ ಬಿದ್ದ ನಂತರ ಪೊಲೀಸರು ವೀಸಾ ಅವಧಿ ಮುಗಿದ ನಂತರವೂ ಇಲ್ಲಿಯೇ ಇರುವ ಆಫ್ರಿಕನ್ನರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದರು. ಬೆಂಗಳೂರು ಪೊಲೀಸರು ಸಿದ್ಧಪಡಿಸಿದ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಪೊಲೀಸ್ ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ 6,000 ಆಫ್ರಿಕನ್ ವಿದ್ಯಾರ್ಥಿಗಳಲ್ಲಿ 1,500 ಕ್ಕೂ ಹೆಚ್ಚು ಮಂದಿಯ ವೀಸಾ ಅವಧಿ ಮುಗಿದಿದೆ.

‘‘ಕಳೆದ ವಾರ 50 ವಿದ್ಯಾರ್ಥಿಗಳನ್ನು ದೇಶದಿಂದ ಹೊರ ಕಳುಹಿಸಲಾಗಿದೆ’’ ಎಂದು ಬೆಂಗಳೂರು ಪೂರ್ವ ಎಸಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಪಿ . ಹರಿಶೇಖರನ್ ಹೇಳಿದ್ದಾರೆ. ಆದರೆ, ಪೊಲೀಸರ ಕ್ರಮ ಆಫ್ರಿಕನ್ ವಿದ್ಯಾರ್ಥಿಗಳ ವಕೀಲರನ್ನು ಕೆರಳಿಸಿದೆ. ‘‘ಇವರೆಲ್ಲಾ ವಿದ್ಯಾರ್ಥಿಗಳು, ಕ್ರಿಮಿನಲ್‌ಗಳಲ್ಲ,’’ ಎಂದು ಅವರು ಹೇಳಿದ್ದಾರೆ. ಕೆಲ ಸಾಮಾಜಿಕ ಕಾರ್ಯಕರ್ತರು ಹೇಳುವಂತೆ ಈ ವಿದ್ಯಾರ್ಥಿಗಳ ವೀಸಾವನ್ನು ಹಲವಾರು ಕಾರಣಗಳನ್ನು ನೀಡಿ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಯನ್ನು ವಿಸ್ತರಿಸದೇ ಇರುವ ಕಾರಣ ಸಮಸ್ಯೆ ಎದುರಾಗಿದ್ದು, ಹಲವು ಪ್ರಕರಣಗಳಲ್ಲಿ ಶುಲ್ಕ ಪಾವತಿಸದೇ ಇರುವುದರಿಂದ ಅವರಿಗೆ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

‘‘ಹೆಚ್ಚಿನ ಆಫ್ರಿಕನ್ ವಿದ್ಯಾರ್ಥಿಗಳು ಮೂರನೇ ಅಥವಾ ನಾಲ್ಕನೆ ವರ್ಷದ ವಿದ್ಯಾರ್ಥಿಗಳಾಗಿರುವುದರಿಂದ ಅವರನ್ನು ಹೊರ ಕಳುಹಿಸಿದಲ್ಲಿ ಅವರ ಭವಿಷ್ಯ ಡೋಲಾಯಮಾನವಾಗುವುದು,’’ ಎಂದು ಆಲ್ಟರ್ನೇಟಿವ್ ಲಾಯರ್ಸ್ ಫೋರಂನ ದರ್ಶನ ಮಿತ್ರ ಹೇಳಿದ್ದಾರೆ.

ಆದರೆ ಈ ವಾದಗಳೆಲ್ಲವನ್ನೂ ನಿರಾಕರಿಸಿರುವ ಬೆಂಗಳೂರು ಪೊಲೀಸರು ಹೇಳುವಂತೆ ಆಫ್ರಿಕನ್ ವಿದ್ಯಾರ್ಥಿಗಳ ಸಮಸ್ಯೆಗೆ ಅವರೇ ಕಾರಣರಾಗಿದ್ದಾರೆ. ‘‘ಅವರಿಗೆ ನಿಜವಾಗಿಯೂ ವೀಸಾ ವಿಸ್ತರಣೆ ದೊರೆಯುತ್ತಿಲ್ಲವೆಂದಾದಲ್ಲಿ ಅವರು ನಮ್ಮನ್ನು ಸಂಪರ್ಕಿಸಲಿ, ನಾವು ಅವರಿಗೆ ಸಹಾಯ ಮಾಡುತ್ತೇವೆ. ಆದರೆ ಅವರ ಕ್ರಿಮಿನಲ್ ಹಿನ್ನೆಲೆಯನ್ನು ನಾವು ಕೆದಕಬಹುದೆಂಬ ಕಾರಣಕ್ಕೆ ಅವರು ಬರಲು ಹಿಂಜರಿಯುತ್ತಿದ್ದಾರೆ’’ ಎಂದು ಎಸಿಪಿ ಹರಿಶೇಖರನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News