ಬಿಸಿ ಬಿಸಿ ಬೆಣ್ಣೆ ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜು.6: ಬಿಡುವಿಲ್ಲದ ಕೆಲಸ ಹಾಗೂ ಮುಂಗಾರು ಅಧಿವೇಶನ ಕಲಾಪದಿಂದ ಬುಧವಾರ ಮುಕ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಜನಾರ್ದನ್ ಹೋಟೆಲ್ನಲ್ಲಿ ತಮ್ಮ ಆಪ್ತರೊಡನೆ ಬೆಳಗಿನ ಉಪಾಹಾರ ಸೇವಿಸಿದರು.
ಮುಖ್ಯಮಂತ್ರಿ ಅವರ ದಿಢೀರ ಭೇಟಿಯಿಂದ ಹೋಟೆಲ್ ಸಿಬ್ಬಂದಿ ಮಾತ್ರವಲ್ಲದೆ ಅಲ್ಲಿನ ಗ್ರಾಹಕರಿಗೂ ಅಚ್ಚರಿ ಮತ್ತು ಆನಂದ ಉಂಟಾಯಿತು. ಸಿದ್ದರಾಮಯ್ಯ ಅವರನ್ನು ಕಂಡೊಡನೆಯೇ ಧಾವಿಸಿ ಬಂದ ಹೋಟೆಲ್ ಸಿಬ್ಬಂದಿ ಕ್ಷಿಪ್ರವಾಗಿಯೇ ಆಸನದ ವ್ಯವಸ್ಥೆ ಮಾಡಿಕೊಟ್ಟರು.
ಮಾಣಿಯಿಂದ ಏನು ತಿಂಡಿ ಇದೆ ಎಂಬುದನ್ನು ತಿಳಿದುಕೊಂಡ ಸಿದ್ದರಾಮಯ್ಯ, ತಮಗಿಷ್ಟವಾದ ಬೆಣ್ಣೆ ದೊಸೆಯನ್ನು ತಿಂದರು. ತಿಂಡಿ ತಿಂದ ಮೇಲೆ ಕಾಫಿ ಸವಿದ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಆರ್.ವಿ.ವೆಂಕಟೇಶ್, ಸಂಸದ ಚಂದ್ರಪ್ಪಸಾಥ್ ನೀಡಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇಂದು ಈದುಲ್ ಫಿತ್ರ್ ಹಬ್ಬ. ಹೀಗಾಗಿ ಸಿಎಂ ಸಿದ್ದರಾಮಯ್ಯ ಫ್ರೀಯಾಗಿದ್ದರು. ನಮ್ಮನ್ನೆಲ್ಲ ಕರೆದುಕೊಂಡು ಬಂದು ಜನಾರ್ದನ್ ಹೋಟೆಲ್ನಲ್ಲಿ ದೋಸೆ ಕೊಡಿಸಿದ್ದಾರೆ. ಇದೊಂದು ಸೌಹಾರ್ದ ಉಪಹಾರ ಕೂಟ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.
Courtesy : Pradesh18Kannada