ಹಾಸನ: ಬಾರ್, ರೆಸ್ಟೋರೆಂಟ್ ಅನುಮತಿ ರದ್ದಿಗೆ ಆಗ್ರಹಿಸಿ ಮಸೀದಿ ಕಮಿಟಿಯಿಂದ ಧರಣಿ
ಹಾಸನ, ಜು.8: ಮಸೀದಿ ಬಳಿ ಹೊಸದಾಗಿ ನಿರ್ಮಿಸುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್‌ಗೆ ನೀಡಿದ ಅನುಮತಿ ರದ್ದು ಮಾಡುವಂತೆ ಆಗ್ರಹಿಸಿ ನೂರುಲ್ ಮುಪ್ರಾ ಮಸೀದಿ ಕಮಿಟಿಯಿಂದ ಧರಣಿ ನಡೆಯಿತು.
ನಗರದ ಸಮೀಪ ಸಕಲೇಶಪುರ ರಸ್ತೆ ಬಳಿ ಇರುವ ತಣ್ಣಿರುಹಳ್ಳದಲ್ಲಿ ನೂರುಲ್ ಮುಪ್ರಾ ಮಸೀದಿ ಹತ್ತಿರ ಹಾಗೂ ಸರಕಾರಿ ಉರ್ದು ಶಾಲೆಯ ಬಳಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಮುಂದಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಈ ಭಾಗದಲ್ಲಿ ಪ್ರತಿ ದಿನ ನೂರಾರು ಜನರು ಸಂಚರಿಸುತ್ತಾರೆ. ಸರಕಾರಿ ಉರ್ದು ಶಾಲೆ ಕೂಡ ನಡೆಯುತ್ತಿದ್ದು, ಅನೇಕ ಮಕ್ಕಳು ವ್ಯಾಸಂಗ ಮಾಡಲು ಬರುತ್ತಾರೆ. ಆದರೆ ಪಕ್ಕದಲ್ಲೆ ಇರುವ ಕಲ್ಯಾಣ ಮಂಟಪವನ್ನು ತೆಗೆದು ಅದೇ ಜಾಗದಲ್ಲಿ ಬೇನಾಮಿ ವ್ಯಕ್ತಿಗಳು ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಮುಂದಾಗಿದ್ದಾರೆ. ಇದರಿಂದ ಅನೇಕರಿಗೆ ಸಮಸ್ಯೆ ಉಂಟಾಗಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು. ಸಾರ್ವಜನಿಕರಿಗೆ ತೊಂದರೆ ಕೊಡುವ ಬಾರ್ ಮತ್ತು ರೆಸ್ಟೋರೆಂಟ್‌ನ್ನು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡರು.
ಧರಣಿಯಲ್ಲಿ ಕಲೀಂಪಾಷ, ಅಬ್ದೂಲ್ ರಫೀಕ್, ರಂಗನಾಥ್, ಪ್ರಕಾಶ್, ಇಬ್ರಾಹೀಂ ಇತರರು ಪಾಲ್ಗೊಂಡಿದ್ದರು.