ವ್ಯಸನ ಮುಕ್ತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ: ನ್ಯಾ.ಪ್ರಭಾವತಿ
ಚಿಕ್ಕಮಗಳೂರು, ಜು.8: ಪ್ರಸ್ತುತ ಸಮಾಜದಲ್ಲಿ ಯುವಪೀಳಿಗೆ ಮಾದಕ ವಸ್ತುಗಳ ಕಡೆಗೆ ಆಕರ್ಷಣೆ ಹೊಂದುತ್ತಿದ್ದು, ಇಂತಹ ಬೆಳವಣಿಗೆ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಡುತ್ತಿದೆ. ಈ ಸಾಮಾಜಿಕ ಪಿಡುಗುಗಳನ್ನು ನಾಶ ಮಾಡಿ, ಮಾದಕ ವ್ಯಸನಮುಕ್ತ ಸಮಾಜ ನಿರ್ಮಿಸುವುದರಿಂದ ಮಾತ್ರ ದೇಶದ ಉನ್ನತಿ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ತಿಳಿಸಿದರು. ಅವರು ಇಂದು ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಎಚ್.ಆರ್.ಡಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ, ಪೊಲೀಸ್ ಇಲಾಖೆ, ವಾರ್ತಾ ಇಲಾಖೆ ಮತ್ತು ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಹಾಗೂ ಅಕ್ರಮ ಕಳ್ಳಸಾಗಣೆ ತಡೆ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವ್ಯಸನಕ್ಕೆ ಒಳಗಾಗಿರುವವರಿಗೆ ಮಾತ್ರ ಅರಿವು ಕಾರ್ಯಕ್ರಮಗಳನ್ನು ಮಾಡುವುದಕ್ಕಿಂತ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಗಳನ್ನು ಮಾಡಿದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾದಕ ವಸ್ತುಗಳಿಂದ ದೂರ ಇರಲು ಅನುಕೂಲವಾಗುವುದು ಎಂದು ಅಭಿಪ್ರಾಯಿಸಿದರು.
ಸ್ವಾಮಿ ವಿವೇಕಾನಂದರ ನುಡಿಯಂತೆ ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ತಿಳಿಸಿದ ಅವರು, ಮನುಷ್ಯ ಯಾವುದೇ ದೌರ್ಬಲ್ಯಗಳನ್ನು ಇಟ್ಟುಕೊಳ್ಳದೆ ಮುನ್ನಡೆದಲ್ಲಿ ಸ್ವಸ್ಥ ಹಾಗೂ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಮಾದಕ ವಸ್ತುಗಳಿಗೆ ದಾಸರಾದಾಗ ವ್ಯಕ್ತಿಯ ಜೀವನ ಜಾರುಬಂಡಿಯ ಮೇಲೆ ಜಾರಿದಂತೆ, ಜಾರುವಾಗ ಸಿಗುವ ಸಂತೋಷ ಕೆಳಕ್ಕೆ ತಲುಪಿದಾಗ ಸಿಗುವುದಿಲ್ಲ ಹಾಗೂ ಪುನಃ ವಾಪಸ್ ಅದೇ ದಾರಿಯಲ್ಲಿ ಮೇಲೇರಲೂ ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಮಾದಕ ವಸ್ತುಗಳ ವ್ಯಸನಗಳನ್ನು ಅಳವಡಿಸಿಕೊಂಡು ಯುವಪೀಳಿಗೆ ತಮ್ಮ ಜೀವನದ ಹಾದಿಯನ್ನು ಕಠಿಣ ಮಾಡಿಕೊಳ್ಳುತ್ತಿದ್ದಾರೆ. ವ್ಯಸನಗಳಿಗೆ ದಾಸರಾಗಿ, ಈ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಸಂತೋಷಪಡುವ ವ್ಯಕ್ತಿ, ಸಮಾಜಕ್ಕೋ, ಪೋಷಕರಿಗೋ ಅಥವಾ ಗುರು ವೃಂದಕ್ಕೋ ಮೋಸ ಮಾಡುತ್ತಿಲ್ಲ. ಬದಲು ತನಗೆ ತಾನೇ ಮೋಸ ಮಾಡಿಕೊಳ್ಳುತ್ತಿದ್ದಾನೆ ಎಂದು ಅಭಿಪ್ರಾಯಪಟ್ಟರು. ಇದೆ ವೇಳೆ ನ್ಯಾಯವಾದಿ ಡಿ.ಬಿ. ಸುಜೇಂದ್ರ ಎನ್‌ಡಿಪಿಎಸ್ ಕಾಯ್ದೆ ಹಾಗೂ ಮಾದಕ ವಸ್ತುಗಳ ಅಕ್ರಮ ಕಳ್ಳಸಾಗಣೆ ತಡೆ ಎಂಬ ವಿಷಯದ ಬಗ್ಗೆ ಹಾಗೂ ಡಾ. ಎಂ. ಚಂದ್ರಶೇಖರ್ ಹಾಗೂ ಡಾ. ವಿನಯ್ ಕುಮಾರ್ ಅವರು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ದಯಾನಂದ ವಿ.ಎಚ್., ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ.ಸುಬ್ಬರಾಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಮಲ್ಲಿಕಾರ್ಜುನಪ್ಪ, ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್. ಕೃಷ್ಣಮೂರ್ತಿ, ಕಾರ್ಯದರ್ಶಿ ಎನ್. ಆರ್. ತೇಜಸ್ವಿ, ಡಾ. ಗಂಗಾಧರ, ಡಾ. ಲೋಕೇಶ, ಡಾ. ಎಸ್.ಕೆ. ಪ್ರಭು ಉಪಸ್ಥಿತರಿದ್ದರು.