×
Ad

ಅಪಾಯಕಾರಿ ಮರಗಳ ತೆರವಿಗೆ ಸೂಚನೆ

Update: 2016-07-08 22:30 IST

 ಹೊನ್ನಾವರ, ಜು.8: ಹೆದ್ದಾರಿಯ ಅಂಚಿನಲ್ಲಿರುವ ಹಲವಾರು ಮರಗಳು ರಸ್ತೆಮೇಲೆ ಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿವೆ. ಇಂತಹ ಮರಗಳನ್ನು ಗುರುತಿಸಿ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಯವರಿಗೆ ಹಾಗೂ ಈ ಪ್ರಕ್ರಿಯೆಯಲ್ಲಿ ಸಹಕರಿಸುವಂತೆ ಅರಣ್ಯ ಇಲಾಖಾಧಿಕಾರಿಯವರಿಗೆ ತಾಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ಸೂಚಿಸಿದರು

ಇಲ್ಲಿಯ ತಾಪಂ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಮಳೆ, ಗಾಳಿಯ ಅಬ್ಬರಕ್ಕೆ ಮರಗಳು ಉರುಳಿಬಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು.

ನಾವು ಈಗಾಗಲೇ ಹೆದ್ದಾರಿಗಳಲ್ಲಿ ಅಪಾಯಕಾರಿಯಾಗಿರುವ ಮರಗಳ ತೆರವಿಗೆ ಪರವಾನಿಗೆ ಕೊಟ್ಟಿದ್ದೇವೆ. ಮರ ಕಡಿಯುವುದು ನಮ್ಮ ಕೆಲಸ ಅಲ್ಲ. ಮರಗಳನ್ನು ಗುರುತು ಮಾಡಿ ಪರವಾನಿಗೆ ಕೊಟ್ಟಿದ್ದೇವೆ ಎಂದು ಗೇರುಸೊಪ್ಪಾವಲಯದ ಆರ್‌ಎಫ್‌ಒ ಪಿ. ಎಸ್.ಗೊಂಡ ಉತ್ತರಿಸಿದರು. ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿ ಪ್ರತಿಕ್ರಿಯಿಸಿ ನಾವು ಲಿಖಿತವಾಗಿ ಪರವಾನಿಗೆ ಕೇಳಿದ್ದೇವೆ. ಹಾಗಾಗಿ ಲಿಖಿತವಾಗಿ ಪರವಾನಿಗೆ ನೀಡಿ ಎಂದರು. ಈ ಇಬ್ಬರು ಅಧಿಕಾರಿಗಳ ಮಾತಿನ ಚಕಮಕಿ ನಡುವೆ ತಾಪಂ ಕಾರ್ಯ ನಿರ್ವಹಣಾಕಾರಿ ಡಾ.ಮಹೇಶ್ ಕುರಿಯವರು ಮಧ್ಯ ಪ್ರವೇಶಿಸಿ ಮಾತನಾಡಿ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ಎರಡೂ ಇಲಾಖಾಧಿಕಾರಿಗಳು ಸಹಕಾರದಿಂದ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಎಂದು ತಿಳಿಸಿದರು.

ತೋಟಗಾರಿಕೆ:  ರೈತರಿಗೆ ತರಬೇತಿ ಯೋಜನೆ ಬಂದಿದೆ. ಶೇ. 50ರ ಸಹಾಯಧನದಡಿ ನೀಡುವ ಮೈಲುತುತ್ತು ಪಡೆಯಲು ಅರ್ಜಿಗಳು ಬಂದಿದ್ದು ತಾಪಂ ಸದಸ್ಯರ ಶಿಫಾರಸು ಪತ್ರ, ಮೈಲುತುತ್ತು ಖರೀದಿ ರಶೀದಿ, ಪಹಣಿ ಪತ್ರಿಕೆ ದಾಖಲೆಗಳನ್ನು ಒದಗಿಸಬೇಕು ಎಂದು ತೋಟಗಾರಿಕಾ ಅಧಿಕಾರಿ ಸಭೆಗೆ ತಿಳಿಸಿದರು.

ಆರೋಗ್ಯ ಇಲಾಖೆ : ಆಸ್ಪತ್ರೆಯಲ್ಲಿ ಪುರುಷ ಸಿಬ್ಬಂದಿ ಹಾಗೂ ಕಂಪ್ಯೂಟರ್ ಆಪರೇಟರ್ ಕೊರತೆಯಿದೆ. 51 ಜನ ಫಲಾನುಭವಿಗಳಿಗೆ ಮಡಿಲು ಕಿಟ್ ವಿತರಿಸಲಾಗಿದೆ. ಅಪಘಾತಗೊಂಡವರಿಗೆ ತಕ್ಷಣ ಚಿಕಿತ್ಸೆ ಲಭಿಸುವಂತೆ ತರಲಾದ ಹರೀಶ್ ಸಾಂತ್ವನ ಯೋಜನೆ ತಾಲೂಕು ಆಸ್ಪತ್ರೆಯಲ್ಲಿ ನೋಂದಣಿ ಆಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಸಭೆಗೆ ತಿಳಿಸಿದರು,

ಕೃಷಿ: ತಾಲೂಕಿನಲ್ಲಿ ಈವರೆಗೆ 673 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಸಕಾಲದಲ್ಲಿ ರೈತರಿಗೆ ಮಾರ್ಗದರ್ಶನ ನೀಡಲು 3ರೈತ ಸಂಪರ್ಕ ಕೇಂದ್ರಗಳಲ್ಲಿ ಕೇವಲ 3 ಜನ ಮಾತ್ರ ಸಿಬ್ಬಂದಿಯಿದ್ದಾರೆ. ಹೊನ್ನಾವರ ಕಚೇರಿಯಲ್ಲೂ ತಾಂತ್ರಿಕ ಸಿಬ್ಬಂದಿಯಿಲ್ಲ. ಸಿಬ್ಬಂದಿಯ ಕೊರತೆ ಸಾಕಷ್ಟಿದೆ ಎಂದು ಕೃಷಿ ಅಧಿಕಾರಿ ಚಾಮರಾಜಪ್ಪಸಭೆಗೆ ತಿಳಿಸಿದರು.

 ಮಹಿಳಾ ಮತ್ತು ಮಕ್ಕಳ ಕಲ್ಯಾಣ:

ತಾಲೂಕಿನಲ್ಲಿ 33 ಅಪೌಷ್ಟಿಕ ಮಕ್ಕಳಿರುವ ಬಗ್ಗೆ ಸಿಡಿಪಿಒ ಸಭೆಗೆ ವಿವರಿಸಿದರು. ಸೂಕ್ತ ಆಹಾರ ಪೂರೈಕೆ ಬಗ್ಗೆ ಅಧ್ಯಕ್ಷರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News