ಶಿವಮೊಗ್ಗ ಮನಪಾದಲ್ಲಿ ಶುರುವಾಗಿದೆ ಕಡತ ಯಜ್ಞ
ಶಿವಮೊಗ್ಗ, ಜು.8: ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಸರಿಸುಮಾರು 12 ಸಾವಿರಕ್ಕೂ ಅಧಿಕ ಕಡತ ವಿಲೇವಾರಿಯಾಗದೆ ಬಾಕಿ ಉಳಿದಿದ್ದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮೇಯರ್ ಎಸ್.ಕೆ. ಮರಿಯಪ್ಪ, ಇದೀಗ ಅಧಿಕಾರಿ-ಸಿಬ್ಬಂದಿ ವಿರುದ್ಧ ಚಾಟಿ ಬೀಸುವ ಕೆಲಸ ಆರಂಭಿಸಿದ್ದಾರೆ. ಶುಕ್ರವಾರ ಕಂದಾಯ ವಿಭಾಗಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ಮೇಯರ್‌ರವರು, ಅಧಿಕಾರಿ, ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಮೇಯರ್‌ರವರು ಕಂದಾಯ ವಿಭಾಗದ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿರುವ ಕಡತಗಳ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಆಯುಕ್ತೆ ತುಷಾರಮಣಿ, ಆಡಳಿತ ಪಕ್ಷದ ನಾಯಕ ವಿಶ್ವನಾಥ ಕಾಶೀ, ಕಾರ್ಪೊರೇಟರ್ ರಘು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಕಡತ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿರುವುದೇಕೆ? ಈ ರೀತಿ ಕೆಲಸ ಮಾಡಿದರೆ ನಾಗರಿಕರು ಪಾಲಿಕೆ ಆಡಳಿತದ ಮೇಲೆ ವಿಶ್ವಾಸವಿಡುವುದಾದರೂ ಹೇಗೆ? ಮುಂದಿನ ಮೂರು ದಿನಗಳಲ್ಲಿ ಬಾಕಿ ಉಳಿಸಿಕೊಂಡಿರುವ ಎಲ್ಲ ಕಡತಗಳ ವಿಲೇವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಕಡತ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಮೇಯರ್‌ರವರು ಅಧಿಕಾರಿ, ಸಿಬ್ಬಂದಿಗೆ ಸ್ಪಷ್ಟ ಸಂದೇಶ ರವಾನಿಸಿದರು. ಬಾಗಿಲು ಬಂದ್:
ಮೂರು ದಿನಗಳೊಳಗೆ ಬಾಕಿಯಿರುವ ಕಡತಗಳ ವಿಲೇವಾರಿಗೊಳಿಸುವಂತೆ ಮೇಯರ್ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಶುಕ್ರವಾರ ದಿಂದ ಸೋಮವಾರದವರೆಗೆ ಕಂದಾಯ ವಿಭಾಗಕ್ಕೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದೆ. ವಿಭಾಗಕ್ಕೆ ಪ್ರವೇಶಿಸುವ ಮುಖ್ಯ ಬಾಗಿಲಿಗೆ ಬೀಗ ಹಾಕಿ, ಕಾವಲುಗಾರರನ್ನು ನಿಯೋಜಿಸಲಾಗಿದೆ. ಒಂದೇ ದಿನದಲ್ಲಿ ಸಾವಿರಾರು ಕಡತಗಳಿಗೆ ಮುಕ್ತಿ: ಸಾವಿರ ಸಾವಿರ ಸಂಖ್ಯೆಯಲ್ಲಿ ಕಡತ ಬಾಕಿ ಉಳಿಸಿಕೊಂಡು ಮೇಯರ್‌ರವರ ಕೆಂಗಣ್ಣಿಗೆ ಗುರಿಯಾಗಿರುವ ಮಹಾ ನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ, ಸಿಬ್ಬಂದಿ ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಒಂದೇ ದಿನದಲ್ಲಿ ಸರಿಸುಮಾರು 1,000 ಕ್ಕೂ ಅಧಿಕ ಕಡತಗಳನ್ನು ವಿಲೇವಾರಿಗೊಳಿಸಿದ್ದಾರೆ.
ಮೇಯರ್‌ರವರು ಕಡತಗಳ ವಿಲೇವಾರಿಗೆ ಮೂರು ದಿನಗಳ ಗಡುವು ನೀಡಿದ್ದಾರೆ. ಗಡುವಿನೊಳಗೆ ಕಡತ ವಿಲೇವಾರಿ ಮಾಡದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯದ ಅವಧಿ ಮುಗಿದ ನಂತರವೂ ಅಧಿಕಾರಿ, ಸಿಬ್ಬಂದಿ ಕಡತ ವಿಲೇವಾರಿಯಲ್ಲಿ ತಲ್ಲೀನವಾಗಿರುವುದು ಕಂಡುಬರುತ್ತಿದೆ. ನಾಗರಿಕರ ಆಕ್ರೋಶ: ಬಾಕಿಯಿರುವ ಕಡತ ವಿಲೇವಾರಿಯ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಕಂದಾಯ ವಿಭಾಗಕ್ಕೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿರುವ ಕ್ರಮಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಆಡಳಿತದ ವಿರುದ್ಧ ಹರಿಹಾಯುತ್ತಿದ್ದ ದೃಶ್ಯ ಕಂಡುಬಂದಿತು. ಆಸ್ತಿ ಪತ್ರ, ಖಾತೆ ಬದಲಾವಣೆ, ಕಂದಾಯ ಪಾವತಿ ಸೇರಿದಂತೆ ನಾನಾ ಕಾರಣಗಳಿಗಾಗಿ ಪ್ರತಿನಿತ್ಯ ನೂರಾರು ಜನರು ಕಂದಾಯ ವಿಭಾಗಕ್ಕೆ ಬರುತ್ತಾರೆ. ಆದರೆ ಏಕಾಏಕಿ ವಿಭಾಗಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ನೂರಾರು ನಾಗರಿಕರು ತಮ್ಮದಲ್ಲದ ತಪ್ಪಿಗೆ ತೊಂದರೆ ಅನುಭವಿಸುವಂತಾಗಿದೆ. ಇವರು ಮಾಡಿಕೊಂಡಿರುವ ತಪ್ಪಿಗೆ ನಾಗರಿಕರಿಗೇಕೆ ಶಿಕ್ಷೆ ನೀಡುತ್ತಿದ್ದಾರೆ. ಎಂದು ನಾಗರಿಕರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.