ಅರಣ್ಯ ನಾಶ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ: ನ್ಯಾ.ಜೈಶಂಕರ್
ತೀರ್ಥಹಳ್ಳಿ, ಜು.8: ಸಂವಿಧಾನದಲ್ಲಿ ಅರಣ್ಯ ನಾಶವನ್ನು ತಡೆಗಟ್ಟಲು ವಿಶೇಷ ಕಾನೂನನ್ನು ರೂಪಿಸಲಾಗಿದೆ. ಜನ ಅರಣ್ಯ ನಾಶವನ್ನು ತಡೆಗಟ್ಟುವಲ್ಲಿ ಜಾಗೃತಿ ವಹಿಸಬೇಕು. ಅರಣ್ಯ ನಾಶ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ ಎಂದು ಶಿವಮೊಗ್ಗದ ಪ್ರಧಾನ ಹಿರಿಯ ನ್ಯಾಯಾಧೀಶ, ಮುಖ್ಯ ನ್ಯಾಯಿಕ ದಂಡಾಧಿಕಾರಿ ಜೈಶಂಕರ್ ಹೇಳಿದ್ದಾರೆ.
ಪಟ್ಟಣದ ಯಡೇಹಳ್ಳಿಕೆರೆಯ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ , ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ, ಅರಳಾಪುರ ಗ್ರಾಪಂ, ಪಪಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಯಡೇಹಳ್ಳಿಕೆರೆಯ ಸುತ್ತಮುತ್ತ ಏಕ ಕಾಲದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ 1,500 ಜನ ಸೇರಿ, ಏಕಕಾಲಕ್ಕೆ 1,500 ಗಿಡ ನೆಡುವ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸುಶಿಕ್ಷಿತರು ಮಾಡಬೇಕಾಗಿದೆ. ದೇಶದಲ್ಲಿಂದು ಶೇ.60ರಷ್ಟು ಅರಣ್ಯನಾಶ ಕೃಷಿಗಾಗಿ ಆಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ಅರಣ್ಯ ನಾಶವು ಮುಂದುವರಿಯುತ್ತಿದ್ದು, ಪ್ರಾಣಿ, ಪಕ್ಷಿ ಸಂಕುಲಕ್ಕೆ ಮಾರಕವಾಗಿದೆ. ನಮ್ಮ ಸುತ್ತಲಿನ ಕೆರೆಗಳನ್ನು ಉಳಿಸಿ ನಿರ್ವಹಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಬೆಂಗಳೂರಿನ ನ್ಯಾಯವಾದಿ ಎಂ.ವಿ.ರೇವಣಸಿದ್ದಯ್ಯ ಮಾತನಾಡಿ, ಕಾನೂನು ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಕೆರೆ, ಪರಿಸರವನ್ನು ಉಳಿಸಿ ಪುನರುಜ್ಜೀವನಗೊಳಿಸುವುದರ ಬಗ್ಗೆ ನ್ಯಾಯಾಧೀಶರಾದ ಸಂದೀಪ್ ಸಾಲಿಯಾನರವರ ಕಾಳಜಿ ಪ್ರತಿಯೊಬ್ಬರಲ್ಲೂ ಮೂಡಬೇಕಾಗಿದೆ. ನೀರು ಜೀವ ಜಲವಾದರೆ ಕಾಡು ಅಕ್ಷಯ ಪಾತ್ರೆ ಎಂಬಂತಹ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಸಮಾರಂಭದ ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗ ಹಿರಿಯ ವ್ಯವಹಾರ ನ್ಯಾಯಾಧೀಶ ಸೋಮಶೇಖರ್ ಸಿ.ಬಾದಾಮಿ, ಪ್ರತಿಯೊಂದು ನೀರಿನ ಬಿಂದುವನ್ನು ಉಳಿಸಿ ಎಂಬ ಘೋಷಣೆಯನ್ನು ಪ್ರತಿಯೊಬ್ಬ ಸಾರ್ವಜನಿಕರು ಅಳವಡಿಸಿಕೊಳ್ಳಬೇಕು. ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದ್ದು, ಒಂದು ಕೆರೆಯನ್ನು ಉಳಿಸಿದರೆ ಒಂದು ಗ್ರಾಮವನ್ನು ಉಳಿಸಿದಂತೆ ಹಾಗೂ ಒಂದು ಉತ್ತಮ ಉದ್ಯಾನವನ ಮಕ್ಕಳ ಭವಿಷ್ಯವನ್ನು ಬದಲಾಯಿಸಬಹುದು ಎಂದರು.
ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಈ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದ ತೀರ್ಥಹಳ್ಳಿ ನ್ಯಾಯಾಲಯದ ನ್ಯಾಯಿಕ ದಂಡಾಧಿಕಾರಿ ಸಂದೀಪ್ ಸಾಲಿಯಾನ್, ಕೆರೆ ಹಾಗೂ ಪರಿಸರದ ನಿರ್ವಹಣೆ, ಪ್ಲಾಸ್ಟಿಕ್‌ಮುಕ್ತ ತೀರ್ಥಹಳ್ಳಿ ಹಾಗೂ ಮಾನಸಿಕ ಅಸ್ವಸ್ಥರಿಗೆ ಆಸರೆಯಾಗುವ ವಿವಿಧ ಯೋಜನೆಗಳನ್ನು ವಿವರಿಸಿದರು.
ಸಮಾರಂಭದ ವೇದಿಕೆಯಲ್ಲಿ ತೀರ್ಥಹಳ್ಳಿ ಹೆಚ್ಚುವರಿ ನ್ಯಾಯಾಧೀಶರಾದ ಲೋಕೇಶ್ ಧನಪಾಲ್, ಅರಣ್ಯ ಇಲಾಖೆ ಎಸಿಎ್ ವಿಜಯಕುಮಾರ್, ಸರಕಾರಿ ಅಭಿಯೋಜಕ ಧೀರೇಂದ್ರ, ತಹಶೀಲ್ದಾರ್ ಲೋಕೇಶ್ವರಪ್ಪ, ತಾಪಂ ಅಧಿಕಾರಿ ಎಂ.ವಿ.ಲಕ್ಷ್ಮಣ್, ವಲಯ ಅರಣ್ಯಾಧಿಕಾರಿಗಳಾದ ಮಧುಸೂದನ್, ಮಂಜುನಾಥ್, ಪಿಎಸ್ಸೈ ಭರತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಡೇಹಳ್ಳಿ ಕೆರೆಯ ಪಕ್ಕದ ಉದ್ಯಾನವನವನ್ನು ಡಾ. ಎಪಿಜೆ. ಅಬ್ದುಲ್ ಕಲಾಂ ಉದ್ಯಾನವನ ಎಂದು ಹೆಸರಿಸಿ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಆರಂಭದಲ್ಲಿ ಜಾನಪದ ಕಲಾವಿದರಾದ ಸಾಗರದ ಗುಡ್ಡಪ್ಪಜೋಗಿ ತಂಡದಿಂದ ಪರಿಸರ ಗೀತೆಗಳನ್ನು ಆಯೋಜಿಸಲಾಗಿತ್ತು.