×
Ad

‘ಗ್ರಾಮ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ’

Update: 2016-07-08 22:38 IST

ಚಿಕ್ಕಮಗಳೂರು, ಜು.8: ಗ್ರಾಮೀಣ ಜನರ ಸಂಕಷ್ಟಗಳಿಗೆ ಸ್ಪಂದಿಸಬಹುದಾದ ಗ್ರಾಮಸಭೆಗೆ ಗೈರಾದ ವಿವಿಧ ಇಲಾಖೆಗಳ 18 ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಒತ್ತಡ ಹಾಕಲಾಗುತ್ತದೆ ಎಂದು ಉಪಾಧ್ಯಕ್ಷ ವೈ.ಜಿ. ಸುರೇಶ್ ತಿಳಿಸಿದರು.

ತಾಲೂಕಿನ ದಾಸರ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ ಅವರು ಮಾತನಾಡಿದರು.

ಇದು ದೊಂಬರಾಟಕ್ಕೆ ಕರೆದ ಸಭೆಯಲ್ಲ ಕೂಲಿನಾಲಿ ಮಾಡಿಕೊಂಡು ಆರ್ಥಿಕವಾಗಿ ಹಿಂದುಳಿದು ನಿತ್ಯಶ್ರಮವಹಿಸಿ ದುಡಿಯುವ ಬಡಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಅವರಿಗೆ ಸ್ಪಂದಿಸಲು ಗ್ರಾಮಸಭೆಗಳು ಸಹಕಾರಿ ಈ ಸಂಬಂಧ ಸರಕಾರ ಎಲ್ಲೆಡೆ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲೆಂದು ಗ್ರಾಮ ಸಭೆಗಳನ್ನು ಮಾಡಿದರೆ 18 ಇಲಾಖಾ ಅಧಿಕಾರಿಗಳು ಬಾರದೆ ಉದಾಸೀನತೆ ತೋರಿರುವುದು ಸರಿಯಲ್ಲ ಅವರಿಗೆ ನೋಟಿಸ್ ಜಾರಿಮಾಡಿ ಎಂದು ತಿಳಿಸಿದರು.

ಈ ಭಾಗಕ್ಕೆ ಹಿಂದೆ ಕುಡಿಯುವ ನೀರಿನ ಯೋಜನೆಯಲ್ಲಿ 18 ಲಕ್ಷ ರೂ. ಬಿಡುಗಡೆಯಾಗಿದ್ದು ಅದನ್ನು ಸಮರ್ಪಕವಾಗಿ ವಿನಿಯೋಗ ಮಾಡದೆ ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ಮಾಹಿತಿಯೂ ನೀಡಿಲ್ಲ ಇದರಿಂದ ಸರಕಾರದ ಹಣ ವ್ಯಯವಾಗಿರುವ ಬಗ್ಗೆ ಜನರಿಗೆ ಅನುಮಾನ ಕಾಡುತ್ತಿದೆ ಈ ಬಗ್ಗೆ ಅರಿಯಬೇಕಾದ ಅವಶ್ಯವಿದೆ ಎಂದರು.

ಅರಿಸಿನಗುಪ್ಪೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತನ್ನ ಅನುದಾನದಲ್ಲಿ 50 ಸಾವಿರ ರೂ. ಅನುದಾನ ನೀಡಿ ಸಹಕರಿಸುವ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಜೆಸಿಂತಾ ಅನಿಲ್‌ಕುಮಾರ್ ಮಾತನಾಡಿ, ಜಿಲ್ಲಾ ಪಂಚಾಯತ್‌ನಿಂದ ದೊರಕುವ ಅನುದಾನದಲ್ಲಿ ಅಂಗನವಾಡಿ, ಕುಡಿಯುವ ನೀರು, ಶಾಲೆಗಳ ದುರಸ್ತಿ, ಕೆರೆ ಸ್ವಚ್ಛತೆಗೆ ಆದ್ಯತೆಕೊಟ್ಟು ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಸಹಕರಿಸುವುದಾಗಿ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಚಿಕುನ್‌ಗುನ್ಯಾ, ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಎಚ್ಚರ ವಹಿಸಬೇಕು ಎಂದರು.

ಮಾಜಿ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಈ ಭಾಗದಲ್ಲಿ ಬಹುತೇಕ ಜನರಿಗೆ ನಿವೇಶನ ಹಾಗೂ ಸೂರಿಲ್ಲ ಅಂತವರನ್ನು ಗುರುತಿಸಬೇಕು. ಬಡಜನರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕು ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷ ಸತೀಶ್, ತಾಲೂಕು ಪಂಚಾಯತ್ ಸದಸ್ಯ ರಮೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಈಶ್ವರ್, ರಾಧಾ, ಹೇಮಾವತಿ, ಗೀತಾ, ಪಾಪಣ್ಣ ಮತ್ತಿತರರು ಉಪಸ್ಥಿತರಿದ್ದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News