ರಾಜ್ಯದ 50 ಕೇಂದ್ರಗಳಲ್ಲಿ ತೊಗರಿಬೇಳೆ ಲಭ್ಯ: ಖಾದರ್
ಬೆಂಗಳೂರು, ಜು.8: ರಾಜ್ಯದ ವಿವಿಧೆಡೆ 50 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಲ್ಲಿ ತೊಗರಿಬೇಳೆ ಪೂರೈಕೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶುಕ್ರವಾರ ಯಶವಂತಪುರದ ಎಪಿಎಂಸಿಯಲ್ಲಿ ಬೇಳೆಕಾಳು ವರ್ತಕರ ಸಂಘ, ಎಫ್‌ಕೆಸಿಸಿಐ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜೊತೆಯಾಗಿ ಆರಂಭಿಸಿರುವ ಬೇಳೆಕಾಳು ಪೂರೈಸುವ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ನಗರ, ಮೈಸೂರು, ಕಲಬುರಗಿ, ರಾಯಚೂರು, ಬೆಳಗಾವಿ ಸೇರಿದಂತೆ ಸುಮಾರು 50 ಎಪಿಎಂಸಿಗಳಲ್ಲಿ ತೊಗರಿಬೇಳೆ ಪೂರೈಕೆ ಕೇಂದ್ರಗಳನ್ನು ತೆರೆಯಲಾಗುವುದು. ತೊಗರಿಬೇಳೆ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳ ಕಾಲ ಈ ಕೇಂದ್ರಗಳ ಮೂಲಕ ಪ್ರತೀ ಕೆಜಿ ತೊಗರಿಬೇಳೆಗೆ 130ರೂ.ನಂತೆ ಗ್ರಾಹಕರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಬೇಳೆಕಾಳುಗಳ ಜೊತೆಗೆ ಉದ್ದಿನಬೇಳೆ, ಸಕ್ಕರೆ ಇತರೆ ಖಾದ್ಯ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಬೇಳೆ ಕಾಳು ಗಳನ್ನು ಪ್ರತೀ ಕೆಜಿಗೆ 130ರೂ.ಗೆ ಮಾರಾಟಮಾಡುವುದರಿಂದ ವ್ಯಾಪಾರಸ್ಥರಿಗೂ ನಷ್ಟವಾಗುವುದಿಲ್ಲ. ಅವರಿಗೆ ಪ್ರತಿ ಕೆಜಿಗೆ 15ರೂ.ನಿಂದ 18ರೂ.ಸಿಗಲಿದೆ. ವ್ಯಾಪಾರಿಗಳು ಾಭದ ದೃಷ್ಟಿಯಿಂದ ನೋಡದೆ ಲಾಭ ಮಾಡುವ ಉದ್ದೇಶಕ್ಕೆ ತಡೆಗೋಡೆ ಹಾಕಿಕೊಂಡು, ಬಡ ಜನರಿಗೂ ಮೋಸ ಆಗದಂತೆ ಕೈಗೆಟುಕುವ ದರದಲ್ಲಿ ಬೇಳೆ ಕಾಳುಗಳನ್ನು ಪೂರೈ ಸಲು ಕ್ರಮಕೈಗೊಳ್ಳಬೇಕೆಂದು ಸಚಿವ ಖಾದರ್ ಸೂಚಿಸಿದರು.
ಮಾಲ್‌ಗಳಲ್ಲಿ ಪ್ರತೀ ಕೆಜಿ ತೊಗರಿಬೇಳೆಗೆ 350ರೂ.ದರ ನಿಗದಿಪಡಿಸಿ ರಿಯಾಯಿತಿ ಹೆಸರಿನಲ್ಲಿ 200 ಹಾಗೂ 250ರೂ.ಗೆ ಮಾರಾಟ ಮಾಡುತ್ತಾರೆ. ಮಾಲ್‌ಗಳಲ್ಲಿ ಬೇಳೆ ಕಾಳುಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡರೆ ಅಂತಹ ಮಾಲ್‌ಗಳ ಮೇಲೆ ದಾಳಿ ನಡೆಸಿ ಬೆಲೆ ಏರಿಕೆ ತಡೆ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾತನಾಡಿ, ಬೇಳೆಕಾಳುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ಸಾವಿರ ಕ್ವಿಂಟಾಲ್, ಇತರೆ ನಗರಗಳಲ್ಲಿ 1 ಸಾವಿರ ಕ್ವಿಂಟಾಲ್ ಬೇಳೆಕಾಳು ಸಂಗ್ರಹಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ಮೀರಿ ಹೆಚ್ಚು ಸಂಗ್ರಹ ಮಾಡಿಕೊಂಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ ರಮೇಶ್ ಚಂದ್ರಲಹೋಟಿ, ದಿನೇಶ್, ರವಿ ಮತ್ತಿತರರಿದ್ದರು.