ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ: ಸಚಿವ ಎ.ಮಂಜು
ಹಾಸನ, ಜು.9: ಯಾರೇ ಆಗಲಿ ಮೊದಲನೆಯದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯಾವ ಅಧಿಕಾರಿಯಾಗಲಿ, ರಾಜಕಾರಣಿಯಾಗಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ಕಾರಣ ಏನೇ ಇರಲಿ, ಬದುಕಿ ಸಾಧಿಸಬೇಕು ಎಂದು ಹೇಳಿದರು.
ಪೊಲೀಸ್ ಅಧಿಕಾರಿಗಳು ಬದುಕಿದ್ದಾಗಲೇ ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ಹಾಕಬಹುದಿತ್ತು. ಯಾರೇ ತಪ್ಪು ಮಾಡಲಿ, ಕಾನೂನು ಅಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಸಚಿವ ಜಾರ್ಜ್‌ರ ರಾಜೀನಾಮೆ ಕೇಳುವುದು ತಪ್ಪುಎಂದು ಸಮರ್ಥಿಸಿಕೊಂಡರು. ಜವಳಿಖಾತೆ ಸಚಿವರು ಡಿವೈಎಸ್ಪಿ ಸಾವನಪ್ಪಿರುವ ಬಗ್ಗೆ ತಿಳಿದೆ ಇಲ್ಲ ಎಂದು ಹೇಳಿರುವುದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ವಿಚಾರ ನನಗೆ ಅವಶ್ಯಕತೆ ಇಲ್ಲ. ಇದು ಅವರ ವೈಯಕ್ತಿಕ ವಿಚಾರ ಎಂದರು.
ಹೊಸ ಬಸ್‌ನಿಲ್ದಾಣದಲ್ಲಿ ಆಗಾಗ್ಗೆ ಅಹಿತಕರ ಘಟನೆ ನಡೆಯುತ್ತಿದ್ದು, ನಿಯಂತ್ರಿಸಲು 30 ಲಕ್ಷ ರೂ. ವೆಚ್ಚದ ಸಿಸಿ ಕ್ಯಾಮರಾ ಖರೀದಿ ಮಾಡಲಾಗಿದೆ. ಜೊತೆಗೆ ಸಾರ್ವಜನಿಕರ ಸಹಕಾರ ಇದ್ದರೇ ಮಾತ್ರ ಅಪರಾಧ ತಡೆಯಲು ಸಾಧ್ಯ ಎಂದು ಮನವಿ ಮಾಡಿದರು. ರೈಲ್ವೆ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಭರವಸೆ ನೀಡಿದರು.
ಕಾಂಗ್ರೆಸ್ ಸರಕಾರ ಬಂದ ಮೇಲೆ ಕುಡಿಯುವ ನೀರಿಗೆ ಹೆಚ್ಚಿನ ಹೊತ್ತು ನೀಡಲಾಗಿದೆ. ಜಿಲ್ಲೆಯ ನಾನಾ ಭಾಗಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಚಿಕ್ಕಬಳ್ಳಪುರ, ರಾಮನಗರ, ತುಮಕೂರು, ಕಡೂರು ಹಾಗೂ ಅರಸೀಕೆರೆ ತಾಲೂಕು ಸೇರಿದಂತೆ ಒಟ್ಟು 527 ಕೆರೆಗಳಿಗೆ ನೀರು ತುಂಬಿಸಲಾಗುವುದು. ಅರಸೀಕೆರೆಯಲ್ಲಿ 34 ಕೆರೆಗಳಿಗೆ ನೀರು ಲಭ್ಯವಾಗಲಿದೆ ಎಂದರು. ಜೊತೆಗೆ ಆ ಭಾಗದ ಗ್ರಾಮಗಳ ಮೂಲಭೂತ ಸೌಕರ್ಯಕ್ಕೂ ಸರಕಾರ ಗಮನ ನೀಡುತ್ತದೆ. ಸಾಲಮನ್ನಾ ವಿಚಾರವಾಗಿ ಸರಕಾರವು ಒಂದು ನಿರ್ಧಾರ ಕೈಗೊಂಡಿದೆ ಎಂದು ಭರವಸೆ ನೀಡಿದರು.
ಹಾಸನದಲ್ಲಿ ಮುಖ್ಯ ಬೆಳೆಯಾದ ಆಲೂಗೆಡ್ಡೆ ಬಿತ್ತನೆ ಬಹುತೇಕ ಮುಗಿದಿದೆ. 2,300 ಟನ್ ಕಡಿಮೆ ದರದಲ್ಲಿ ಸರ್ಟಿಫೈಡ್ ಬಿತ್ತನೆ ಆಲೂಗೆಡ್ಡೆಯನ್ನು ಸರಕಾರ ನೀಡಿದೆ. ವಾತಾವರಣ ಗಮನಿಸಿದರೆ ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು. ಎತ್ತಿನಹೊಳೆಗೆ 1,800 ಕೋಟಿ ರೂ.ಗಳಲ್ಲಿ ಕೆಲಸವಾಗುತ್ತಿದೆ. ಒಟ್ಟು 24 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಪುರ ಸೇರಿ 527 ಎಕರೆಗೆ ನೀರು ಸಿಗಲಿದೆ. 2017ರ ವೇಳೆಗೆ ಒಂದು ಹಂತಕ್ಕೆ ಕೆಲಸ ಮುಗಿಯಲಿದೆ ಎಂದರು. ಆ ಭಾಗದ ಜನರ ಅನುಕೂಲಕ್ಕಾಗಿ ಸರಕಾರ ಚಿಂತನೆ ಮಾಡಿದೆ. ಸಕಲೇಶಪುರ ಭಾಗದಲ್ಲಿನ ಭೂಮಾಲಕರಿಗೆ ಇನ್ನು ಪರಿಹಾರ ನೀಡಿಲ್ಲ ಎಂದು ಅಸಮಾಧಾನವಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಧಿವೇಶನದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಕಾನೂನು ರೀತಿ ಪರಿಹಾರ ನೀಡುವ ಭರವಸೆ ನೀಡಿದರು.