ನವ ಕರ್ನಾಟಕ ಸಂಘದ ಲಾಂಛನ ಅನಾವರಣ
ಅಂಕೋಲಾ, ಜು.9: ಕನ್ನಡ ನಾಡುನುಡಿ ಸಂಸ್ಕೃತಿಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಕನ್ನಡಪರ ಸಂಟನೆಯಾದ ನವ ಕರ್ನಾಟಕ ಸಂಘ ಅಂಕೋಲಾ ಕನ್ನಡದ ಏಳಿಗೆಗಾಗಿ ದುಡಿಯುವ ಉದ್ದೇಶದಿಂದಲೇ ಸ್ಥಾಪಿತವಾಗಿರುವ ಸಂಸ್ಥೆ ಎಂದು ನವ ಕರ್ನಾಟಕ ಸಂಘದ ಅಧ್ಯಕ್ಷ ಮಂಜುನಾಥ ಗಾಂವ್ಕರ ಬರ್ಗಿ ಹೇಳಿದರು. ಪಟ್ಟಣದ ಗುರುಪ್ರಸಾದ್ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ಸಂಘದ ಲಾಂಛನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಕನ್ನಡನಾಡು ಬರಿ ನೆಲವಲ್ಲ, ಜೀವಸೆಲೆ. ಸಮಾನ ಮನಸ್ಕರಿಂದೊಡಗೂಡಿದ ನವ ಕರ್ನಾಟಕ ಸಂಘವು ಯಾವುದೇ ರಾಜಕೀಯ ಮತ್ತು ಆರ್ಥಿಕ ಫಲಾಪೇಕ್ಷೆಯಿಲ್ಲದೆ ಕನ್ನಡ ನುಡಿಯ ಸೇವೆಗಾಗಿಯೇ ಹುಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ಕನ್ನಡದ ಏಳಿಗೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳುವ ಮನಸ್ಸುಳ್ಳವರು ಸಂಘವನ್ನು ಸೇರಲು ಮುಕ್ತ ಅವಕಾಶವಿದೆ ಎಂದರು. ಸಂಘದ ಸಂಚಾಲಕ ನಾಗಪತಿ ಹೆಗಡೆ ಮಾತನಾಡಿ, ಸಾವಿರಾರು ವರ್ಷಗಳ ಧೀಮಂತ ಪರಂಪರೆಯನ್ನು ಹೊಂದಿದ ಕನ್ನಡ ನಾಡುನುಡಿ ಸಂಸ್ಕೃತಿಗಳ ಉಳಿವಿಗಾಗಿ ನವ ಕರ್ನಾಟಕ ಸಂಘವು ಉದಯವಾಗಿದೆ. ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಹಲವು ಸಂಘಟನೆಗಳಂತೆಯೇ ನವ ಕರ್ನಾಟಕ ಸಂಘವೂ ಶ್ರಮಿಸಲಿದೆ. ನಿಸ್ವಾರ್ಥದಿಂದ ಕನ್ನಡದ ಕೆಲಸ ಮಾಡುವ ಮನಸ್ಸುಳ್ಳ ಪ್ರತಿಯೊಬ್ಬರನ್ನೂ ಸಂಘವು ತೆರೆದ ಬಾಹುಗಳಿಂದ ಸ್ವಾಗತಿಸುತ್ತದೆ ಎಂದರು. ಸಂಘದ ಕಾರ್ಯದರ್ಶಿ, ಲಾಂಛನದ ಕಲಾವಿದ ಶ್ಯಾಮಸುಂದರ ಗೌಡ ಅವರು ಸರ್ವರನ್ನೂ ಸ್ವಾಗತಿಸಿ, ಲಾಂಛನದ ಅಂತರಾರ್ಥವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ ಕುಂಜಿ, ಸಹ ಕಾರ್ಯದರ್ಶಿ ಜಿ.ಆರ್.ತಾಂಡೇಲ, ಕೋಶಾಧ್ಯಕ್ಷ ಗಣಪತಿ ನಾಯಕ ಶೀಳ್ಯ, ಸ್ಮರಣ ಸಂಚಿಕೆಯ ಕಾರ್ಯದರ್ಶಿ ವೆಂಟು ಮಾಸ್ತರ ಶೀಳ್ಯ, ಸದಸ್ಯರಾದ ಮುಹಮ್ಮದ್ ಶಫಿ ಶೇಖ್, ಪ್ರಶಾಂತ ಶೆಟ್ಟಿ, ಶ್ರೀನಿವಾಸ ನಾಯಕ ಮಾತನಾಡಿದರು.