×
Ad

ಶಿಕ್ಷಣ ಕೇಸರೀಕರಣಕ್ಕೆ ಕೇಂದ್ರದ ಹುನ್ನಾರ

Update: 2016-07-09 21:56 IST

ಶಿವಮೊಗ್ಗ, ಜು.9: ಕೇಂದ್ರೀಯ ಪಠ್ಯಪುಸ್ತಕಗಳಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ದೇಶದ್ರೋಹಿಗಳ ರೀತಿಯಲ್ಲಿ ಬಿಂಬಿಸಲಾಗಿದೆ. ಪಠ್ಯಪುಸ್ತಕಗಳನ್ನು ಬಿಜೆಪಿಯ ಸಿದ್ಧಾಂತ ಗಳಿಗೆ ಅನುಗುಣವಾಗಿ ಬದಲಾಯಿಸುತ್ತಾ ಶಿಕ್ಷಣ ಕೇಸರಿಕರಣಗೊಳಿಸಲು ಕೇಂದ್ರ ಸರಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪಠ್ಯ ಪುಸ್ತಕಗಳಲ್ಲಿ ಅನಗತ್ಯ ವಿಚಾರಗಳನ್ನು ಸೇರಿಸುವ ಮೂಲಕ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತು ತಪ್ಪು ತಿಳುವಳಿಕೆ ಮೂಡಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಪ್ರತಿಭಟನಾಕಾರರು, ಇದಕ್ಕೆ ನಿದರ್ಶನ ಎಂಬಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪಠ್ಯಪುಸ್ತಕಗಳು ಕೇಸರಿಕರಣ ಗೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಇದೀಗ ಕೇಂದ್ರಿಯ ವಿದ್ಯಾಲಯದ 6ನೆ ತರಗತಿಯ ಪಠ್ಯ ಪುಸ್ತಕದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಭಗತ್‌ಸಿಂಗ್, ಚಂದ್ರಶೇಖರ್ ಆಝಾದ್, ಸೂರ್ಯಸೇನ್ ಮುಂತಾದವರನ್ನು ಕ್ರಾಂತಿಕಾರಿ ಭಯೋತ್ಪಾದಕರು ಎಂದು ಹೇಳುವ ಮೂಲಕ ಮಕ್ಕಳಲ್ಲಿ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ತಪ್ಪುಭಾವನೆ ಮೂಡುವಂತೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಾಭಿಮಾನ ಎಂದು ಹೇಳಿಕೊಳ್ಳುವ ಬಿಜೆಪಿಯಿಂದಲೇ ದೇಶಾಭಿಮಾನಿಗಳಿಗೆ ಹಾಗೂ ಸ್ವಾತಂತ್ರ ಸೇನಾನಿಗಳಿಗೆ ಅಪಮಾನವಾಗುತ್ತಿದೆ. ಆದ್ದರಿಂದ ಕೂಡಲೇ ಈ ಪಠ್ಯಪುಸ್ತಕಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಎನ್‌ಎಸ್‌ಯುಐ ರಾಷ್ಟ್ರಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ರಾಷ್ಟ್ರಪತಿಯವರು ಮಧ್ಯೆ ಪ್ರವೇಶಿಸಬೇಕು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರೀಯ ಪಠ್ಯಪುಸ್ತಕ ರಚನೆಯಲ್ಲಾಗಿರುವ ಲೋಪ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News