×
Ad

ಗ್ರಾಪಂಗಳಲ್ಲಿ ಆಶ್ರಯ ಮನೆ ನೀಡುವಲ್ಲಿ ಸರಕಾರ ವಿಪಲ: ಸಚಿವ ಕಾಗೋಡು

Update: 2016-07-09 22:06 IST

ತೀರ್ಥಹಳ್ಳಿ,ಜು.9: ಸಾಮಾಜಿಕ ನ್ಯಾಯ, ಸಮಾನತೆ, ಮೂಲಭೂತ ಹಕ್ಕು ಎಂಬ ತತ್ವವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. ಸಮಾಜದ ಬದಲಾವಣೆಗೆ ಪೂರಕವಾದ ಕಾರ್ಯಕ್ರಮಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಾ ಬಂದಿದೆ. ಮಹಿಳೆಯರು ಸಬಲರಾಗಬೇಕು. ನಂಬಿಕೆ ವಿಶ್ವಾಸಗಳಿಸಬೇಕು ಎಂಬ ಗುರಿಯೊಂದಿಗೆ ಕಾಂಗ್ರೆಸ್ ಸರಕಾರ ಮೂರು ವರ್ಷ ಪೂರೈಸಿ ಸಾಧನೆಯ ಹಾದಿಯಲ್ಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಪಟ್ಟಣದ ಕೆ.ಟಿ.ಕೆ. ಸಭಾಭವನದಲ್ಲಿ ನಡೆದ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

 ಮೂರು ವರ್ಷಗಳ ನಂತರ ಮೊದಲ ಬಾರಿಗೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದೇನೆ. ಕಾಂಗ್ರೆಸ್ ದೊಡ್ಡ ಸಮೂಹ ಹೊಂದಿದ ಪಕ್ಷವಾಗಿದ್ದು, ಪಕ್ಷದ ಮೂರೂ ವರ್ಷದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕತರು ಮತ್ತು ಮುಖಂಡರು ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಸಂಘಟನೆ ಅನಿವಾರ್ಯ ಎಂದರು.

   ಗ್ರಾಪಂಗಳಲ್ಲಿ ಕಾಂಗ್ರೆಸ್ ಸರಕಾರ ಆಶ್ರಯ ಮನೆ ನೀಡುವಲ್ಲಿ ವಿಲವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಅರಣ್ಯ ಹಕ್ಕು ಸಮಿತಿಯವರು ವಾರಕ್ಕೊಮ್ಮೆ ಸಭೆ ನಡೆಸಿ ಆಡಳಿತ ನಡೆಸುವವರು ಇಚ್ಛಾಶಕ್ತಿ ತೋರಿಸಬೇಕು. ಸರಕಾರದ ಆದೇಶ ಪಾಲಿಸದಿದ್ದರೆ ಎಂತಹ ಅಧಿಕಾರಿಯನ್ನೂ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, ಕಾಗೋಡು ತಿಮ್ಮಪ್ಪರಂತಹ ಹಿರಿಯ ಮುತ್ಸದ್ದಿಯನ್ನು ಸರಕಾರ ಸಚಿವ ಸ್ಥಾನ ನೀಡಿ ಗೌರವಿಸಿರುವುದು ರಾಜ್ಯದ ಅದೃಷ್ಟ. ನಾನು ಈ ಕ್ಷೇತ್ರದ ಶಾಸಕನಾಗಲು ಕಾಗೋಡು ತಿಮ್ಮಪ್ಪನವರೇ ಕಾರಣ. ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷ ಮುನ್ನಡೆಗೆ ಕಾಗೋಡು ತಿಮ್ಮಪ್ಪನವರ ಆಶೀರ್ವಾದ ಅತಿ ಮುಖ್ಯ ಎಂದರು.

ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ವಿ.ಪ. ಸದಸ್ಯ ಪ್ರಸನ್ನಕುಮಾರ್, ಮಾಜಿ ಶಾಸಕ ಪಟಮಕ್ಕಿ ರತ್ನಾಕರ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್,ಮಾಜಿ ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಡಾ. ಸುಂದರೇಶ್, ಜಿಪಂಸದಸ್ಯರು, ತಾಪಂ ಸದಸ್ಯರು, ಪಂ ಸದಸ್ಯರು, ವಿವಿಧ ಬ್ಲಾಕ್‌ನ ಅಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News