×
Ad

ರೈತರು ಪರಸ್ಪರ ಸಹಕಾರದಿಂದ ಮುನ್ನಡೆಯಿರಿ: ರಘುನಾಥ್

Update: 2016-07-09 22:10 IST

ಚಿಕ್ಕಮಗಳೂರು, ಜು.9: ಬದಲಾದ ಕಾಲಘಟ್ಟದಲ್ಲಿ ರೈತ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಲ್ಲಿ ಮುನ್ನಡೆಯಬೇಕು ಎಂದು ಫಾರ್ಮರ್ಸ್‌ ಸರ್ವಿಸ್ ಫೋರಂ ಸದಸ್ಯ ಎನ್.ಆರ್.ರಘುನಾಥ್ ಹೇಳಿದರು.

ಮೂಡಿಗೆರೆ ಚರ್ಚ್ ಹಾಲ್‌ನಲ್ಲಿ ಆಯೋಜಿಸಿದ್ದ ಫಾರ್ಮರ್ಸ್‌ ಸರ್ವೀಸ್ ಫೋರಂನ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಸಮಯಕ್ಕೆ ಬಹು ಬೆಲೆಯಿದೆ. ರೈತರ ಜೀವನ ಸರಕಾರಿ ಇಲಾಖೆಗಳನ್ನು ಅಲೆಯುವುದರಲ್ಲಿಯೇ ಕಳೆದು ಹೋಗುತ್ತಿದೆ. ತನ್ನ ಜಮೀನಿಗೆ ಸಂಬಂಧಿಸಿದ ಒಂದು ಪಹಣಿ ತೆಗೆದುಕೊಳ್ಳಬೇಕೆಂದರೆ ದಿನಗಟ್ಟಲೇ ಅಲೆಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಮಾನಸಿಕ ಕಿರಿಕಿರಿ, ಸಮಯ ವ್ಯರ್ಥವಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ರೈತರು ಪರಸ್ಪರ ಸಹಕಾರದಿಂದ ತಮ್ಮ ಕೆಲಸ ಕಾರ್ಯಗಳನ್ನು ಜೋಡಿಸಿಕೊಂಡರೆ ಅದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಜಮೀನಿಗೆ ಬೇಕಾದ ಸುಣ್ಣ, ರಸರಗೊಬ್ಬರ, ರಾಸಾಯನಿಕ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳುವಾಗ ರೈತರು ಒಂದು ಗುಂಪಾಗಿ ಕೊಳ್ಳುವುದು, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಾಗಲೂ ಒಟ್ಟಾಗಿ ಮಾರಾಟ ಮಾಡುವುದು ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದರು.

ಇದಕ್ಕೆ ಪೂರಕವಾಗಿ ಕಳೆದ ಒಂದು ವರ್ಷದ ಹಿಂದೆ ಮೂಡಿಗೆರೆಯಲ್ಲಿ ಆರಂಭವಾದ ಫಾರ್ಮರ್ಸ್‌ ಸರ್ವೀಸ್ ಫೋರಂ ರೈತರಿಗೆ ಬಹುರೀತಿಯಲ್ಲಿ ಸೇವೆ ಸಲ್ಲಿಸುವುದರಲ್ಲಿ ಮುಂದಡಿ ಇಟ್ಟಿದೆ. ಪಹಣಿಯಿಂದ ವಿದೇಶಪ್ರವಾಸದ ವರೆಗಿನ ಸೇವೆಗಳು ಒಂದೇ ಸೂರಿನಡಿ ದೊರೆಯಬೇಕು ಎಂಬ ಧ್ಯೇಯದೊಂದಿಗೆ ಪ್ರಾರಂಭವಾದ ಸಂಸ್ಥೆಗೆ ರೈತರು ಉತ್ಸಾಹದಿಂದ ಸದಸ್ಯರಾಗುತ್ತಿದ್ದಾರೆ. ಸಣ್ಣ ಸಣ್ಣ ಕೆಲಸಕ್ಕೂ ಪ್ರತಿದಿನ ಪಟ್ಟಣಕ್ಕೆ ಬರುವುದರಿಂದ ರೈತರ ಶ್ರಮ, ಹಣ ವ್ಯರ್ಥವಾಗುವುದನ್ನು ತಪ್ಪಿಸಿ ಸರಳವಾಗಿ ತಮ್ಮ ಕೆಲಸಗಳನ್ನು ಮಾಡಿಕೊಡುವುದರಲ್ಲಿ ಫಾರ್ಮರ್ಸ್‌ ಸರ್ವೀಸ್ ಫೋರಂ ಒಂದು ಯಶಸ್ವಿ ಪ್ರಯೋಗವಾಗಿದೆ ಎಂದರು.

ಫಾರ್ಮರ್ಸ್‌ ಸರ್ವೀಸ್ ಫೋರಂನ ದೇವರುಂದ ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News