ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆಯ ಸಂಶೋಧನೆ ಅಗತ್ಯ: ರಾಜನಾಥ ಸಿಂಗ್
ಬೆಂಗಳೂರು, ಜು.9: ವಿಶ್ವದಲ್ಲೆ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಯ ಪ್ರಮಾಣವು ಗಣನೀಯ ಪ್ರಮಾಣ ದಲ್ಲಿ ಹೆಚ್ಚಳವಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ, ಪುನರ್ ಬಳಕೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನೆಯ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಹೇಳಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಅತ್ಯಾಧುನಿಕ ಪ್ಲಾಸ್ಟಿಕ್ ಸಂರಚನೆ, ಅಭಿವೃದ್ಧಿ ಸಂಶೋ ಧನಾ ಪ್ರಯೋಗಾಲಯ ಹಾಗೂ ಪುನರ್‌ಬಳಕೆ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮರು ಬಳಕೆ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಪರಿಸರ ರಕ್ಷಣೆ ಮಾಡಬೇಕಿದೆ. ಮನುಷ್ಯನ ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯ ಪ್ರಮಾಣ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ಮಾತ್ರ ಇಡೀ ವಿಶ್ವದಲ್ಲೆ ಪ್ಲಾಸ್ಟಿಕ್ ಉತ್ಪಾದನೆಯು ಶೇ.50ರಷ್ಟು ಹೆಚ್ಚಳವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕದಿದ್ದರೆ 2050ರ ವೇಳೆಗೆ ಸಮುದ್ರದಲ್ಲಿ ಆಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಸೋರಿಕೆಯಿಂದ ಮತ್ಸ ಸಂತತಿಗೆ ಗಂಡಾಂತರ ಕಾದಿದೆ. ಆದುದರಿಂದ, ಪ್ಲಾಸ್ಟಿಕ್‌ನ ಮರು ಬಳಕೆ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಗಳು ನಡೆಯಬೇಕಿದೆ. ಈ ಸಂಶೋಧನಾ ಪ್ರಯೋಗಾಲಯವು ಈ ನಿಟ್ಟಿನಲ್ಲಿ ಯಶಸ್ಸುಗಳಿಸಲಿ ಎಂದು ಅವರು ಹಾರೈಸಿದರು.
ರಾಜ್ಯದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಯವರು ಕೇಂದ್ರ ಸರಕಾರಕ್ಕಿಂತ 15 ದಿನ ಮುಂಚಿತವಾಗಿ ಸ್ಟಾರ್ಟಪ್ ಪಾಲಿಸಿ(ನವೋದ್ಯಮ ನೀತಿ) ಜಾರಿಗೆ ತಂದಿರುವುದಕ್ಕೆ ಅವರಿಗೆ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ ಎಂದು ರಾಜನಾಥ್‌ಸಿಂಗ್ ಹೇಳಿದರು.
ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರ ಮದಿಂದಾಗಿ ಹಲವಾರು ಸಂಶೋಧನಾ ಕೇಂದ್ರಗಳು ಆರಂಭಗೊಳ್ಳುತ್ತಿವೆ. ರಕ್ಷಣಾ ಇಲಾಖೆಗೆ ಇತ್ತೀಚೆಗೆ ಸೇರ್ಪಡೆಯಾದ ಯುದ್ಧ ವಿಮಾನ ‘ತೇಜಸ್’ ಮೇಕ್ ಇನ್ ಇಂಡಿಯಾದ ಯಶಸ್ಸಿನ ಭಾಗವಾಗಿದೆ ಎಂದು ರಾಜನಾಥ್‌ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶವು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಪ್ರಥಮ ಸ್ಥಾನದತ್ತ ದಾಪುಗಾಲು ಇಟ್ಟಿದೆ. ಮೇಕ್ ಇನ್ ಇಂಡಿಯಾ ಮೂಲಕ ವಿಶ್ವದ ಪ್ರಮುಖ ಮೂರು ಆರ್ಥಿಕ ಸಶಕ್ತ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ದೇವನಹಳ್ಳಿ ಕೈಗಾರಿಕಾ ವಲಯದಲ್ಲಿ ಸ್ಥಾಪನೆಯಾಗಲಿರುವ ಈ ಸಂಶೋಧನಾ ಪ್ರಯೋಗಾಲಯಕ್ಕೆ ರಾಜ್ಯ ಸರಕಾರವು 5 ಎಕರೆ ಭೂಮಿಯನ್ನು ಒದಗಿಸಲಿದೆ. ಅಲ್ಲದೆ, ಈ ಘಟಕ ಸ್ಥಾಪನೆಗೆ ಶೇ.50ರಷ್ಟು ತನ್ನ ಪಾಲನ್ನು ಭರಿಸಲಿದೆ ಎಂದರು.
ನ್ಯಾನೋ ಹಾಗೂ ಜೈವಿಕ ವಿಜ್ಞಾನವನ್ನು ಪ್ಲಾಸ್ಟಿಕ್ ಮರುಬಳಕೆಯ ಸಂಶೋಧನೆಗೆ ಬಳಕೆ ಮಾಡುವ ನಿಟ್ಟಿನಲ್ಲಿ ಅಧ್ಯಯನಗಳು ನಡೆಯಲಿ. ವಿಜ್ಞಾನ ಸಮೂ ಹವು ರಾಸಾಯನಿಕ ಹಾಗೂ ಪೆಟ್ರೊಕೆಮಿಕಲ್ಸ್‌ನ ಉತ್ಪಾದನೆಗೆ ಅತ್ಯುತ್ತಮವಾದ ತಂತಜ್ಞಾನಗಳನ್ನು ಆವಿಷ್ಕರಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಎನ್.ಅನಂತ್‌ಕುಮಾರ್, ರಾಜ್ಯದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಸಂಸದ ಪಿ.ಸಿ.ಮೋಹನ್, ಶಾಸಕ ಪಿಳ್ಳ ಮುನಿಶಾಮಪ್ಪ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್, ಪ್ರೊ.ಎಸ್.ಕೆ.ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.