×
Ad

ವೈಯಕ್ತಿಕ ಸ್ವಾರ್ಥಕ್ಕಾಗಿ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

Update: 2016-07-10 00:01 IST

ಬೆಂಗಳೂರು, ಜು. 9: ಸಿಬಿಐಯನ್ನು ‘ಚೋರ್ ಬಚಾವೋ ಸಂಸ್ಥೆ’ ಎಂದು ಲೇವಡಿ ಮಾಡುತ್ತಿದ್ದ ಬಿಜೆಪಿ ಮುಖಂಡರು ಇದೀಗ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವುದರ ಹಿಂದೆ ವೈಯಕ್ತಿಕ ಹಿತ ಅಡಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
 ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ನಿಗೂಢ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಬೆಳಕಿಗೆ ಬರಬೇಕೆಂದು ಕೂಡಲೇ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತನಿಖೆ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ತ್ವರಿತಗತಿಯಲ್ಲಿ ತನಿಖೆ ನಡೆಸಿ ಶೀಘ್ರವಾಗಿ ವರದಿ ನೀಡಲು ಸಿಐಡಿಗೆ ಆದೇಶಿಸಿದ್ದು, ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ. ಆದರೆ, ಅದಕ್ಕೂ ಮೊದಲೇ ಇಂಥವರಿಂದಲೇ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ತಾವು ಸಿಬಿಐ ತನಿಖೆಗೆ ಆಗ್ರಹಿಸಿದರೆ ಆಗ ಸಿಬಿಐಯನ್ನು ಬಿಜೆಪಿ ಮುಖಂಡರು ‘ಚೋರ್ ಬಚಾವೋ ಸಂಸ್ಥೆ’ ಎಂದು ಲೇವಡಿ ಮಾಡುತ್ತಿದ್ದರು. ಆದರೆ, ಇದೀಗ ಅವರೇ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಆಗ್ರಹಿಸುತ್ತಿರುವುದರ ಹಿಂದಿನ ಮರ್ಮವೇನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವು ಅಧಿಕಾರಕ್ಕೆ ಬಂದ ಬಳಿಕ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದೇವೆ. ಸಿಬಿಐ ತನಿಖೆಯ ಬಗ್ಗೆ ರಾಜ್ಯ ಸರಕಾರಕ್ಕೆ ಯಾವುದೇ ಭಯ ಇಲ್ಲ ಎಂದ ಸಿದ್ದರಾಮಯ್ಯ, ವಿಪಕ್ಷಗಳ ತಾಳಕ್ಕೆ ತಕ್ಕಂತೆ ಸರಕಾರ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಂಬಂಧ ಈಗಾಗಲೇ ಸರಕಾರದ ಸಿಐಡಿ ತನಿಖೆಗೆ ವಹಿಸಿದ್ದು, ತನಿಖಾ ವರದಿ ಬರುವವರೆಗೂ ವಿಪಕ್ಷಗಳು ಕಾಯಲಿ ಎಂದ ಸಿದ್ದರಾಮಯ್ಯ, ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ಸರಕಾರದ ವ್ಯವಸ್ಥೆಯೊಳಗೆ ಕೆಲ ತಪ್ಪುಗಳು, ಕೆಲ ಲೋಪದೋಷಗಳು ಆಗಬಹುದು. ಅವುಗಳನ್ನು ಸರಿಪಡಿಸುವ ದೃಷ್ಟಿಯಿಂದ ಸೂಕ್ತ ಸಂದರ್ಭಗಳಲ್ಲಿ ತೀರ್ಮಾನಗಳನ್ನು ಕೈಗೊಳ್ಳುತ್ತದೆ. ಆದರೆ, ಹೀಗೆ ಆಗಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ ಸರಕಾರ ಘೋಷಿಸಿದ ಪರಿಹಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಬಂಡೆ ಅವರ ಪತ್ನಿ ಮಲ್ಲಮ್ಮ ಬ್ರೈನ್ ಟ್ಯೂಮರ್‌ನಿಂದ ನಿಧನರಾಗಿದ್ದು, ಬೇರೆ ಪ್ರಕರಣಗಳ ಜತೆ ಅವರ ಸಾವನ್ನು ತಳಕು ಹಾಕುವುದು ಸರಿಯಲ್ಲ’
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News