ಸಾಹಿತಿ ಮುರುಗನ್ ಮರುಹುಟ್ಟು

Update: 2016-07-09 18:47 GMT

 ಸಾಹಿತಿ ಮರುಹುಟ್ಟು ಪಡೆಯಲು ಬಿಡಿ, ಸರ್ವೋತ್ಕೃಷ್ಟ ಸಾಹಿತ್ಯ ರಚನೆ ಮುಂದುವರಿಯಲಿ...
- ಇದು ಸೃಜನಶೀಲ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಿ, ‘ಸಾಹಿತಿ’ಯೊಬ್ಬನ ‘ಆತ್ಮಹತ್ಯೆ’ಗೆ ಕಾರಣವಾದ ಬಲಪಂಥೀಯ ಶಕ್ತಿಗಳಿಗೆ ನ್ಯಾಯಾಂಗ ಕಿವಿಹಿಂಡಿ ಹೇಳಿರುವ ಬುದ್ಧಿಮಾತು. ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಅಬಾಧಿತ, ಅದನ್ನು ಯಾವ ರಾಜಕೀಯ ಶಕ್ತಿಯಿಂದಲೂ ಹತ್ತಿಕ್ಕಲಾಗದು ಎಂದು ಪುನರುಚ್ಚರಿಸಿರುವ ತೀರ್ಪೊಂದರ ಮೂಲಕ ಮದ್ರಾಸ್ ಹೈಕೋರ್ಟ್ ದೇಶದ ಸೃಜನಶೀಲ ಲೇಖಕ-ಕಲಾವಿದರ ರಕ್ಷಣೆಗೆ ಧಾವಿಸಿರುವುದು ಆತಂಕ ಪರಿಸ್ಥಿತಿಯಲ್ಲಿ ಗೋಚರಿಸಿರುವ ನೆಮ್ಮದಿಯ ಒಂದು ಆಶಾಕಿರಣ. ಈ ಐತಿಹಾಸಿಕ ಮಹತ್ವದ ತೀರ್ಪಿನ ಹಿಂದಿನ ತಮಿಳು ಸಾಹಿತಿಯೊಬ್ಬನ ದಾರುಣ ಕಥೆ ದೇಶದಾದ್ಯಂತ ಸಾಹಿತಿ-ಕಲಾವಿದರನ್ನು ದಂಗುಬಡಿಸಿದ ಪ್ರಕರಣ.
ಮದ್ರಾಸ್ ಉಚ್ಚನ್ಯಾಯಾಲಯದ ತೀರ್ಪಿನ ಅಧ್ಯಯನಕ್ಕೆ ಮುನ್ನ ಈ ಪ್ರಕರಣದತ್ತ ಒಂದು ವಿಹಂಗಮ ನೋಟ ಹರಿಸುವುದು ಉಚಿತವಾದೀತು.
ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯಿಂದಾಗಿ ನಾವು ಕಳೆದುಕೊಂಡಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆ ಕರಾಳ ದಿನಗಳ ಅಂತ್ಯದ ನಂತರ ಮರಳಿ ಪಡೆದೆವಾದರೂ ಪತ್ರಕರ್ತ/ಸಾಹಿತಿ/ಕಲಾವಿದರ ನೆತ್ತಿಯ ಮೇಲೆ ಸ್ವಾತಂತ್ರ್ಯ ಹರಣದ ಕತ್ತಿ ತೂಗುತ್ತಲೇ ಇರುವುದು ಬೆದರಿಕೆ, ಕೃತಿಗಳ ನಿಷೇಧ/ಮುಟ್ಟುಗೋಲು ಹೀಗೆ ಒಂದಲ್ಲೊಂದು ಘಟನೆಗಳಿಂದ ವ್ಯಕ್ತವಾಗುತ್ತಲೇ ಇದೆ. ಎಂ.ಎಫ್.ಹುಸೈನ್, ಎ.ಕೆ.ರಾಮಾನುಜನ್ ಅವರಿಂದ ಹಿಡಿದು, ಕನ್ನಡದಲ್ಲಿ ಪಿ.ವಿ. ನಾರಾಯಣರ ‘ಧರ್ಮ ಕಾರಣ’, ಶಿವಪ್ರಕಾಶರ ‘ಮಹಾಚೈತ್ರ’, ಬಂಜಗೆರೆ ಜಯಪ್ರಕಾಶರ ‘ಆನುದೇವ ಹೊರಗಣವನು’ ಇತ್ಯಾದಿ ಕೃತಿಗಳ ನಿಷೇಧದವರೆಗೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಇಂಥ ಒಂದು ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಪ್ರಕರಣ ತಮಿಳು ಸಾಹಿತಿ ಪ್ರೊ. ಪೆರುಮಾಳ್ ಮುರುಗನ್ ಅವರದು.

      ವೃತ್ತಿಯಿಂದ ಅಧ್ಯಾಪಕರಾದ ಪ್ರೊ. ಪೆರುಮಾಳ್ ಮುರುಗನ್ ಪ್ರವೃತ್ತಿಯಿಂದ ಸೃಜನಶೀಲ ಲೇಖಕರು. ಕಾದಂಬರಿ ಅವರ ಮಾಧ್ಯಮ. ಶಿಕ್ಷಣ ಕ್ಷೇತ್ರದಲ್ಲಿನ ವ್ಯಾಪಾರಿ ಮನೋಭಾವದಿಂದ ಹಿಡಿದು ಸಮಾಜದಲ್ಲಿನ ಹಲವು ಹನ್ನೊಂದು ಶೋಷಣೆಗಳ ವಿರುದ್ಧ ಲೇಖನಿ ಎತ್ತಿದ್ದ ಮುರುಗನ್ ಅವರೊಳಗಣ ಸಾಹಿತಿ, ಸ್ತ್ರೀಯೊಬ್ಬಳ ‘ತಾಯ್ತನದ’ ಹಂಬಲವನ್ನು ಪ್ರಕೃತಿಸಹಜವೆಂಬಂತೆ ಕಾದಂಬರಿಯೊಂದರಲ್ಲಿ ಅಭಿವ್ಯಕ್ತಗೊಳಿಸಿದ್ದೇ ಸ್ವಯಂಘೋಷಿತ ಧರ್ಮರಕ್ಷಕರ ದೃಷ್ಟಿಯಲ್ಲಿ ಮಹಾಪರಾಧವೆನಿಸಿತು. ‘ಮಾಧೋರುಬಗನ್’ ಆ ಕಾದಂಬರಿ. ಸಂತಾನರಹಿತ ದಂಪತಿಯ ಬದುಕಿನಚಿತ್ರಣ ಈ ಕಾದಂಬರಿಯ ಕೇಂದ್ರಬಿಂದು. ನಮ್ಮಲ್ಲಿ ಸಂತಾನರಹಿತ ಸ್ತ್ರೀಯರಿಗೆ ಮಕ್ಕಳನ್ನು ಕರುಣಿಸುವ ದೇವಾನುದೇವತೆಗಳಿಗೆ ಲೆಕ್ಕವಿಲ್ಲ. ಅವುಗಳಿಗೆ ನಡೆದುಕೊಳ್ಳುವ ಭಕ್ತಗಣವೂ ಇದೆ. ಇಂಥದೊಂದು ನಂಬಿಕೆಯ ಕೇಂದ್ರ ಅರ್ಧನಾರೀಶ್ವರ ದೇವಸ್ಥಾನ. ಸಂತಾನ ಭಾಗ್ಯ ಕರುಣಿಸುವ ಈ ದೇವಾಲಯದ ಸುತ್ತಮುತ್ತ ಕಣ್ಣಾಡಿಸಿರುವ ಮುರುಗನ್ ಅವರು ತಾವು ಕಂಡದ್ದನ್ನು ಈ ಕಾದಂಬರಿಯಲ್ಲಿ ದಾಖಲಿಸುವ ಪ್ರಯತ್ನಮಾಡಿದ್ದಾರೆ. ಇದರ ಇಂಗ್ಲಿಷ್ ಅನುವಾದ ‘ಇನ್ ಪಾರ್ಟ್ ವುಮನ್’ ಪ್ರಕಟಗೊಂಡಿದೆ. ಮುರುಗನ್ ಅವರ ತಮಿಳು ಕಾದಂಬರಿ 2010ರಲ್ಲಿ ಪ್ರಕಟವಾಗಿ ಹಲವಾರು ಮರುಮುದ್ರಣಗಳನ್ನು ಕಂಡಿದೆ. ತಮಿಳರು ಅದನ್ನು ಓದಿ ಆಸ್ವಾದಿಸಿದ್ದಾರೆ. ಇಂಗ್ಲಿಷ್ ಭಾಷಾಂತರ ಪ್ರಕಟಗೊಂಡದ್ದೇ ಅದರ ವಿರುದ್ಧ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ ಎಂದು ದೊಡ್ಡ ಕೂಗೆದ್ದಿತು. ಮುವತ್ತೈದಕ್ಕೂ ಹೆಚ್ಚು ಕಾದಂಬರಿಗಳ ಲೇಖಕರಾದ ಮುರುಗನ್ ದೇವರು-ಪುರಾಣ- ಸಂಪ್ರದಾಯಗಳನ್ನೊಳಗೊಂಡ ಜನಜೀವನವನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದು ‘ಮಾಧೋರುಬಗನ್’ ನಲ್ಲೂ ಸಂತಾನಕ್ಕಾಗಿ ಹಂಬಲಿಸುವ ಸ್ತ್ರೀಕೇಂದ್ರಿತ ವಸ್ತುವನ್ನು ತುಂಬ ಸಂವೇದನಾಶೀಲತೆಯಿಂದ ಚಿತ್ರಿಸಿದ್ದಾರೆಂದು ವಿಮರ್ಶಕರು ಹೇಳಿದ್ದಾರೆ.ವಿಮರ್ಶೆಯ ವಿವೇಕವೂ ವಿರೋಧವನ್ನು ಶಮನ-ಗೊಳಿಸುವುದರಲ್ಲಿ ಸಫಲವಾಗಲಿಲ್ಲ. ಬಲಪಂಥೀಯ ಸಂಘಟನೆಗಳ ಕೂಗು ಜೋರಾಗಿ ಮುರುಗನ್ ವಿರುದ್ಧ ಚಳವಳಿ ಶುರುವಾಯಿತು. ಪ್ರತಿಭಟನೆ ಉಗ್ರಸ್ವರೂಪ ಪಡೆದಾಗ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿತು.ಕಾಯ್ದೆ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರ ನೇತೃತ್ವದಲ್ಲಿ ಶಾಂತಿ ಸಂಧಾನ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿ ಕುತ್ತಿಗೆಪಟ್ಟಿ ಹಿಡಿದು ಮುರುಗನ್ ಅವರಿಂದ ಬೇಷರತ್ ಕ್ಷಮಾಪಣೆ ಬರೆಸಿಕೊಂಡಿತು. ಇದೆಲ್ಲದರಿಂದ ಬೇಸತ್ತ ಪೆರುಮಾಳ್ ಮುರುಗನ್ ತಮ್ಮ ಫೇಸ್‌ಬುಕ್‌ನಲ್ಲಿ ತಮ್ಮಿಳಗಣ ಸಾಹಿತಿಯ ಮರಣ ವಾರ್ತೆ ಬರೆದರು. ‘‘ಬೆದರಿಕೆ ಹೆದರಿಕೆಗಳ ಪರಿಸ್ಥಿತಿಯಲ್ಲಿ ಲೇಖಕ-ನೊಬ್ಬನಿಂದ ಬರವಣಿಗೆ ಮಾಡುವುದು ಸಾಧ್ಯವಿಲ್ಲವಾದ್ದರಿಂದ ಪ್ರೊ.ಪೆರುಮಾಳ್ ಮುರುಗನ್ ಅವರೊಳಗಣ ‘ಸಾಹಿತಿ ಮುರುಗನ್’ ಸತ್ತಿದ್ದಾನೆ. ನಾನು ಇನ್ನು ಲೇಖನಿ ಹಿಡಿಯುವುದಿಲ್ಲ’’ ಎನ್ನ್ನುವುದು ಫೇಸ್‌ಬುಕ್ ಬರಹದ ಒಕ್ಕಣೆಯಾಗಿತ್ತು. ಸಹಜವಾಗಿಯೇ ಈ ಇಡೀ ವಿದ್ಯಮಾನ ಲೇಖಕಕಲಾವಿದರನ್ನು ವಿವಂಚನೆಗೆ ಈಡುಮಾಡಿತು. ಸಹಲೇಖಕನಿಗೆ ಬೆಂಬಲವಾಗಿ ನಿಂತ ತಮಿಳುನಾಡು ಪ್ರಗತಿಶೀಲ ಲೇಖಕರು ಮತ್ತು ಕಲಾವಿದರ ಸಂಘ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಶಾಂತಿ ಸಮಿತಿಯ ತೀರ್ಮಾನವನ್ನು ಮತ್ತು ಒತ್ತಾಯದಿಂದ ಬರೆಸಿಕೊಂಡ ಬೇಷರತ್ ಕ್ಷಮಾಪಣೆಯನ್ನು ಅಸಿಂಧುಗೊಳಿಸುವಂತೆ ಮನವಿ ಮಾಡಿಕೊಂಡಿತು. ಈ ಸಮಿತಿಯ ಕಲಾಪ ಮತ್ತು ನಿರ್ಣಯಗಳಿಗೆ ಲೇಖಕ ಬದ್ಧನಲ್ಲವೆಂದು ಘೋಷಿಸುವಂತೆಯೂ ಸಂಘ ನ್ಯಾಯಾಲಯದ ಮೊರೆಹೊಕ್ಕಿತ್ತು. ಇನ್ನೂ ಕೆಲವರು ಮುರುಗನ್ ಪರ-ವಿರುದ್ಧ ಉಚ್ಚ ನ್ಯಾಯಾಲಯದ ಮೊರೆಹೊಕ್ಕರು. ತಿರುಚೆಂಗೋಡು ಸ್ಥಳೀಯರ ಪ್ರತಿನಿಧಿ ಎನ್ನಲಾದ ಆರ್.ವೆಳ್ಳಿಯನ್‌ಗಿರಿಯವರು, ಮುರುಗನ್ ಅವರು ತಮಿಳಿನಲ್ಲಿ ಬರೆದಿರುವ ‘ಮೋಧೋರುಬಾಗನ್’ ಮತ್ತು ಅದರ ಇಂಗಿಷ್ ಅನುವಾದವನ್ನು ವಶಕ್ಕೆ ತೆಗದುಕೊಂಡು ವಿದ್ಯುನ್ಮಾನ ಮಾಧ್ಯಮವೂ ಸೇರಿದಂತೆ ಎಲ್ಲ ಮಾಧ್ಯಮಗಳ ಮೂಲಕ ದೇಶದ ಜನರಿಗೆ ತಲುಪಿಸುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶ ನೀಡಬೇಕೆಂದು ಮನವಿ ಮಾಡಿಕೊಡಿದ್ದರು. ನಾಮಕ್ಕಳ್ ಜಿಲ್ಲಾ ಸೆಂಗುಂಥ ಮಹಾಜನಸಂಘಮ್ ಮತ್ತು ಕೊಂಗು ವೆಲ್ಲಾಳರ್ ಸಂಗಂಗಳ್ ಕೋಟಿಮಾಯಿಪ್ಪುಎಂಬೆರಡು ಸಂಘಟನೆಗಳು, ಹಿಂದೂಗಳು ಮತ್ತು ಸ್ಥಳೀಯ ನಿವಾಸಿಗಳ ಮನಸ್ಸುಗಳನ್ನು ನೋಯಿಸಿರುವ ಲೇಖಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿಕೊಂಡು ಕ್ರಮಜರುಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು. ಉಚ್ಚನ್ಯಾಯಾಲಯ ಮುರುಗನ್ ವಿರುದ್ಧ ಕ್ರಿಮಿನಲ್‌ಕ್ರಮಗಳನ್ನು ಜರುಗಿಸಬೇಕೆಂಬ ಹಾಗೂ ಕಾದಂಬರಿಯನ್ನು ನಿಷೇಧಿಸಬೇಕೆಂಬ ಅರ್ಜಿಗಳನ್ನು ವಜಾಮಾಡಿದೆ. ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಪೂರ್ವನಿದರ್ಶನವಾಗುವಂಥ ಮನನೀಯವಾದ ತೀರ್ಪನ್ನು ನೀಡಿದೆ.

ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್.ಕೆ.ಕೌಲ್ ಮತ್ತು ನ್ಯಾಯಮೂರ್ತಿ ಪುಷ್ಪಸತ್ಯನಾರಾಯಣ ಅವರನ್ನೊಳಗೊಂಡ ಪೀಠ 134 ಪುಟಗಳ ಸುದೀರ್ಘ ತೀರ್ಪನ್ನು ನೀಡಿದ್ದು, ಕಟ್ಟೆ ಪಂಚಾಯತ್ ಮೂಲಕ ಸಾಹಿತಿಯೊಬ್ಬನ ಬಾಯಿ ಮುಚ್ಚಿಸಿದ, ಲೇಖನಿ ಸ್ತಂಭನ ಮಾಡಿಸಿದ ಕ್ರಮವನ್ನು ಖಂಡಿಸಿದೆ. ಶಾಂತಿ ಸಮಿತಿಯ ತೀರ್ಮಾನ ಸಾಹಿತಿ ಪೆರುಮಾಳ್ ಮುರುಗನ್‌ಗೆ ಬದ್ಧವಲ್ಲ ಎಂದು ಖಚಿತವಾಗಿ ಹೇಳಿದೆ. ‘‘ಆಯ್ಕೆ ಯಾವತ್ತೂ ವಾಚಕರದು. ನಿಮಗೆ ಪುಸ್ತಕವೊಂದು ಇಷ್ಟವಾಗದಿದ್ದಲ್ಲಿ ಅದನ್ನು ಬಿಸಾಡಿ. ಆ ಪುಸ್ತಕವನ್ನು ಓದಲೇಬೇಕೆಂಬ ಕಡ್ಡಾಯವೇನಿಲ್ಲ. ಸಾಹಿತ್ಯಾಭಿರುಚಿಯಲ್ಲಿ ವ್ಯತ್ಯಾಸ-ವೈವಿಧ್ಯತೆಗಳಿರಬಹುದು. ಒಬ್ಬರಿಗೆ ಸರಿಕಂಡದ್ದು, ಅಂಗೀಕಾರಾರ್ಹವೆನಿಸಿದ್ದು ಇನ್ನೊಬ್ಬರಿಗೆ ಸರಿಕಾಣದಿರಬಹುದು. ಆದಾಗ್ಯೂ ಬರೆಯುವ ಹಕ್ಕು ಅಬಾಧಿತವಾದದ್ದು.’’ ಎಂದು ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿರುವ ನ್ಯಾಯಾಲಯ, ಸಾಹಿತಿ ಮರುಹುಟ್ಟು ಪಡೆದು ತನ್ನ ಶ್ರೇಷ್ಠತೆಯನ್ನು ಮೆರೆಯಲಿ, ಬರೆಯುತ್ತಿರಲಿ ಎಂದು ಘೋಷಿಸಿದೆ.
ಇಂಥ ಅಭಿಪ್ರಾಯ ಭೇದಗಳು, ಸಂಘರ್ಷಗಳು ಸಂಭವಿಸಿದ ಸಂದರ್ಭಗಳಲ್ಲಿ ಅವುಗಳ ಪರಾಮರ್ಶೆಗೆ ತಜ್ಞರ ಸಮಿತಿಯೊಂದಿರಬೇಕು. ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಪೊಲೀಸರು ಅಥವಾ ಸ್ಥಳೀಯ ಆಡಳಿತದ ವಿವೇಚನೆಗೆ ಬಿಡಬಾರದು ಎಂಬ ಪ್ರಕಾಶಕರ ಪರ ವಕೀಲರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ಮೂರು ತಿಂಗಳಿನಲ್ಲಿ ಇಂಥದೊಂದು ತಜ್ಞರ ಸಮಿತಿಯನ್ನು ರಚಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.


   

ಕಾಯ್ದೆ ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಲೇಖಕರಿಂದ ಬೇಷರತ್ ಕ್ಷಮಾಪಣೆ ಬರೆಸಿಕೊಳ್ಳಬೇಕಾಯಿತು. ಪ್ರತಿಭಟನಾಕಾರರನ್ನು ಸಾಂತ್ವನಗೋಳಿಸಲು ಇದ್ದುದು ಅದೊಂದೇ ಮಾರ್ಗ ಎನ್ನುವುದು ಪೊಲೀಸರ ವಾದವಾಗಿತ್ತು. ಇದನ್ನು ನ್ಯಾಯಪೀಠ ಗಮನಿಸದೇ ಇಲ್ಲ. ಕಾಯ್ದೆ ಸುವ್ಯವಸ್ಥೆ ಪಾಲನೆ ಸರಕಾರದ ಹೊಣೆ. ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವಂತೆ ಸರಕಾರ ಲೇಖಕರ ಮೇಲೆ ಒತ್ತಡ ಹೇರಲಾಗದು. ಇಂಥ ಒತ್ತಡಗಳನ್ನು ಬೇರಿನಲ್ಲೇ ಚಿವುಟಿ ಹಾಕುವ ದೃಷ್ಟಿಯಿಂದ ಸಾಹಿತಿಗಳೂ ಕೆಲವೊಂದು ಮಾರ್ಗದರ್ಶನ ಸೂತ್ರಗಳನ್ನು ಅನುಸರಿಸುವುದು ಅಗತ್ಯ. ಹಾಗಾದಲ್ಲಿ ಕಾಯ್ದೆ ಸುವ್ಯಸ್ಥೆಯಂಥ ಆಯಾಮಗಳು ಉದ್ಭವಿಸುವುದಿಲ್ಲ. ಸಾಹಿತಿ-ಕಲಾವಿದರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಾಪಾಡಬೇಕು, ಸಾಹಿತಿಗಳು ಸಮಾಜದ ಒಂದು ವರ್ಗದ ಆಕ್ರೋಶಕ್ಕೆ ಗುರಿಯಾದಾಗ ಅವರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದೂ ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿದೆ. ಈ ತೀರ್ಪಿನಿಂದಾಗಿ ಪ್ರೊ.ಪೆರುಮಾಳ್ ಮುರುಗನ್ ಅವರೇನೊ ಸದ್ಯಕ್ಕೆ ಬಚಾವ್ ಆದರು. ಆದಾಗ್ಯೂ ತಜ್ಞರ ಸಮಿತಿಯ ಪರಾಮರ್ಶೆ ಎಂದಾಗ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ ಒಬ್ಬಿಬ್ಬರು ನ್ಯಾಯಾಧೀಶರು ಅಥವಾ ತಜ್ಞರ ಮರ್ಜಿ-ಹಂಗುಗಳಲ್ಲಿ ಸಿಲುಕಿದಂತಾಗುವುದಿಲ್ಲವೆ? ತಜ್ಞರೂ ಸ್ವಂತ ಇಷ್ಟ-ಅನಿಷ್ಟ-ಪೂರ್ವಾಗ್ರಹಗಳಿಂದ ಮುಕ್ತರಾದ ದೇವಮಾನವರಾಗಿರುತ್ತಾರೆಂದು ನಿರೀಕ್ಷಿಸು ವುದೆಂತು? ಇತ್ಯಾದಿ ಪ್ರಶ್ನೆಗಳು ಉಧ್ಭವಿಸುವುದು ಸಹಜ. ಮುರುಗನ್ ಅವರ ಕಾದಂಬರಿ ಅಶ್ಲೀಲ ಎಂದೋ ಅಥವಾ ಸಮಾಜದ ಒಂದು ವರ್ಗದ ಶ್ರದ್ಧೆ ನಂಬಿಕೆಗಳಿಗೆ ಘಾಸಿಯುಂಟುಮಾಡುತ್ತದೆ ಎಂದೋ ವಿಮರ್ಶಕ/ತಜ್ಞರು ಒಂದು ವೇಳೆ ಅಭಿಪ್ರಾಯಪಟ್ಟಲ್ಲಿ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಂಟಕ ಬಂದಂತೆಯೇ ಅಲ್ಲವೇ? ಏಕೆಂದರೆ ಒಬ್ಬಿಬ್ಬರ ಮರ್ಜಿ-ಅಭಿಪ್ರಾಯಗಳಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೊದಗಿದ ಪೂರ್ವ ನಿದರ್ಶನಗಳು ಇವೆ. ಐವತ್ತು ವರ್ಷಗಳ ಹಿಂದೆ ಡಿ.ಎಚ್. ಲಾರೆನ್ಸನ ‘ಲೇಡಿ ಚಾಟರ್ಲೀಸ್ ಲವರ್’ ಕಾದಂಬರಿಯನ್ನು ನಿಷೇಧಿಸಿದ ಸರಕಾರದ ಕ್ರಮ ವನ್ನು ನ್ಯಾಯಾಲಯ ಎತ್ತಿಹಿಡಿದಿತ್ತು. ಲಾರೆನ್ಸರ ಬರವಣಿಗೆಯಲ್ಲಿ ಸಾಹಿತ್ಯವನ್ನಾಗಲೀ ಸಮಾಜವನ್ನಾಗಲೀ ಪಾವನಗೊಳಿಸುವಂಥದ್ದು ಏನೂ ಇಲ್ಲವಾದ್ದರಿದ ನಿಷೇಧ ನ್ಯಾಯಬದ್ಧವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಆಗಿನ ಮುಖ್ಯ ನ್ಯಾಯಾಧೀಶ ಎಂ. ಹಿದಾಯತ್ ಉಲ್ಲಾ ಅವರು ತೀರ್ಪು ನೀಡಿದ್ದರು. (ಮದ್ರಾಸ್ ಉಚ್ಚ ನ್ಯಾಯಾಲಯವೂ ಮುರುಗನ್ ಪ್ರಕರಣದ ತೀರ್ಪಿನಲ್ಲಿ ಲೇಡಿ ಚಾಟರ್ಲೀಸ್ ಲವರ್ ಪ್ರಸಂಗವನ್ನು ಪ್ರಸ್ತಾಪಮಾಡಿದೆ.) ಪಿ.ವಿ.ನಾರಾಯಣರ ‘ಧರ್ಮಕಾರಣ’ ಕೃತಿಯನ್ನು ನಿಷೇಧಿಸಿ ಕರ್ನಾಟಕ ಸರಕಾರ ಹೊರಡಿಸಿದ ಆಜ್ಞೆಯನ್ನು ನ್ಯಾಯಾಲಯ ಎತ್ತಿಹಿಡಿದಿರುವ ನಿದರ್ಶನವಿದೆ. ಹೀಗೆ ವಿವಾದಿತ ಕೃತಿಯೊಂದರ ಹಣೆಯಬರಹ ನ್ಯಾಯಾಧೀಶರು ಅಥವಾ ತಜ್ಞರ ವ್ಯಕ್ತಿಕೇಂದ್ರಿತ ಅಭಿಪ್ರಾಯ/ಮರ್ಜಿಗನುಗುಣವಾಗಿ ನಿರ್ಧರಿಸಲ್ಪಡುವ ಅಪಾಯವಿದೆ. ಒಮ್ಮಾಮ್ಮೆ ಕೃತಿಯ ಬಗ್ಗೆ ಬಂದಿರುವ ಅನುಕೂಲಕರ ವಿಮರ್ಶೆವಿವೇಚನೆಗಳು ಲೇಖಕರ ನೆರವಿಗೆ ಬರಲೂಬಹುದು. ಆದರೆ ಪ್ರತಿಭಟಿಸುವ ಕೂಗುಮಾರಿಗಳ ಸ್ವಾತಂತ್ರ್ಯದ ಮುಂದೆ ಇಂಥ ದನಿಗಳು ಕೇಳಿಸದೇ ಹೋಗಬಹುದು. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಪ್ರಶ್ನೆ ಹಾಗೇ ಉಳಿಯುತ್ತದೆ. ಸಮಾಜದ ಮುಖ್ಯವಾಹಿನಿ ಮೆಚ್ಚುವಂಥ, ನಾಲ್ಕು ಜನರ ಮೆಚ್ಚುಗೆ ಪಡೆದ ಕೃತಿಗಳಿಗೆ ಕಾನೂನಿನ ರಕ್ಷಣೆ ಇದೆ. ಆದರೆ ಸಮಾಜದ ಅಂಧಶ್ರದ್ಧೆನಂಬಿಕೆಗಳನ್ನು, ಅರ್ಥವಿಲ್ಲದ ಆಚರಣೆ-ಸಂಪ್ರದಾಯಗಳನ್ನು ಖಂಡಿಸುವ, ಆಸ್ತಿಕತೆಯನ್ನು ನಿರಾಕರಿಸುವ, ವ್ಯವಸ್ಥೆಯನ್ನು ವಿರೋಧಿಸುವಂಥ ಕ್ರಾಂತಿಕಾರಿ ಆಲೋಚನೆಯ, ಭಿನ್ನ ಜಾಡಿನ ಕೃತಿಗಳಿಗೆ ಕಾನೂನಿನ ರಕ್ಷಣೆ ಇಲ್ಲ. ಸಾಹಿತ್ಯಕಲೆಗಳ ಮುಖೇನ ಅಭಿವ್ಯಕ್ತಿಸುವ ತಮ್ಮ ರಸಾಭಿಜ್ಞತೆ, ಅಭಿರುಚಿ, ಜೀವನ ದರ್ಶನ, ವಿಚಾರಜಿಜ್ಞಾಸೆ, ಅಥವಾ ರಾಜಕೀಯ ಒಲವು ನಿಲುವುಗಳನ್ನು ನ್ಯಾಯಾಲಯದ ಮುಂದೆ, ತಜ್ಞರ ಸಮಿತಿ ಮುಂದೆ ಸಾಹಿತಿ-ಕಲಾವಿದರು ಸಮರ್ಥಿಸಿ ಕೊಳ್ಳಬೇಕಾದಂಥ ಪರಿಸ್ಥಿತಿ ಇರುವವವರೆಗೂ ನಿಜವಾದ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಇಲ್ಲ.

ಭರತ ವಾಕ್ಯ:
ಬಿಟ್ಟರೋ ಕಾಡಲ್ಲಿ ಕಣ್ಣುಕಟ್ಟಿ;
ಸುತ್ತಲೂ ಬಿಗಿದಿಟ್ಟು ಮುಳ್ಳು-ತಂತಿ:
ಕುಡಿಯಲುಪ್ಪಿನ ನೀರು; ತಿನ್ನಲು ಬೆಂಕಿಯ ಚೂರು;
ಕುಣಿಯಲೆಂದೇ ಬೇಡಿ ಕಾಲ ತೊಡವು.
-ಗೋಪಾಲಕೃಷ್ಣ ಅಡಿಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News