ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿ: ಮಂಗಳಾದೇವಿ
ಮುದ್ದೇಬಿಹಾಳ, ಜು.10: ಚಿಕ್ಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು. ಇದರಿಂದ ಭವಿಷ್ಯದ ದಿನಗಳು ಉತ್ತಮವಾಗಿರಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಗಳಾದೇವಿ ಬಿರಾದಾರ ಹೇಳಿದ್ದಾರೆ.
ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಮದ ಹೊರವಲಯದಲ್ಲಿರುವ ಮದರಸಾ ಬಳಿಯ ಪ್ರಭುಗೌಡ ಶಾಂತಗೌಡ ಪಾಟೀಲ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಸಸಿ ನೆಟ್ಟು ನೀರೆರೆಯುವ ಮೂಲಕ ವೃಕ್ಷ ಅಭಿಯಾನಕ್ಕೆ ಮಕ್ಕಳಿಂದಲೇ ಚಾಲನೆ ಕೊಡಿಸಿ ಅವರು ಮಾತನಾಡುತ್ತಿದ್ದರು.
ಪರಿಸರ ಕಾಳಜಿ ನಾವು ಮಾಡಿದಲ್ಲಿ ಮಾತ್ರ ಪರಿಸರ ನಮ್ಮ ಕಾಳಜಿ ಮಾಡುತ್ತದೆ. ಪರಿಸರ ನಾಶಗೊಂಡರೇ ಮನುಷ್ಯರೂ ನಾಶವಾಗುತ್ತಾರೆ ಎನ್ನುವ ಪ್ರಜ್ಞೆಯನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಬೆಳೆಸಬೇಕು. ಇಂದಿನ ಮಗು ಮುಂದಿನ ನಾಗರಿಕ ಎನ್ನುವಂತೆ ಇಂದಿನ ಸಸಿ ಮುಂದಿನ ಹೆಮ್ಮರ ಎನ್ನುವ ಅರಿವನ್ನೂ ಮಕ್ಕಳಲ್ಲಿ ಬೆಳೆಸಿದಲ್ಲಿ ಅವರು ಪರಿಸರದೊಂದಿಗೆ ಬೆಳೆದು ಪ್ರಜ್ಞಾವಂತರು, ಜವಾಬ್ಧಾರಿ ಅರಿತವರು ಆಗುತ್ತಾರೆ ಎಂದರು.
ಇದೇ ಸಂದರ್ಭ ಶಾಲೆಯ ಶಿಕ್ಷಕರು ಪ್ರಾಂಶುಪಾಲೆ ಫ್ಲಾವಿಯಾ ಜೊತೆಗೂಡಿ ಮಕ್ಕಳಿಗೆ ಸಸಿ ನೆಟ್ಟು ಪೋಷಿಸುವ ತಿಳುವಳಿಕೆ ನೀಡಿ, ಪ್ರಾಯೋಗಿಕವಾಗಿ ಮಕ್ಕಳಿಂದಲೇ ಸಸಿ ನೆಟ್ಟು ನೀರು ಹಾಕುವುದನ್ನು ಕಲಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಂಜು ಶೆಟ್ಟಿ, ಚೇತನ್ ಮೋಟಗಿ, ಹಣಮಂತ ನಲವಡೆ, ಗುಂಡು ಹೊಕ್ರಾಣಿ, ಜೆಡಿಎಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.