ಮುದ್ದೇಬಿಹಾಳ: ಸರಕಾರದ ವಿರುದ್ಧ ಯುವಮೋರ್ಚಾ ಪ್ರತಿಭಟನೆ
ಮುದ್ದೇಬಿಹಾಳ, ಜು.10: ಡಿವೈಎಸ್ಪಿಗಳಾದ ಕಲ್ಲಪ್ಪ ಹಂಡಿಬಾಗ್, ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ವೈಫಲ್ಯ ಖಂಡಿಸಿ ಇಲ್ಲಿನ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಶನಿವಾರ ಬಸವೇಶ್ವರ ವೃತ್ತದಲ್ಲಿ ಸಚಿವ ಕೆ.ಜೆ.ಜಾರ್ಜ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಕೃತಿ ದಹಿಸುವುದಕ್ಕೂ ಮುನ್ನ ಮಲಕೇಂದ್ರಗೌಡ ಪಾಟೀಲ, ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಜಗದೀಶ ಪಂಪಣ್ಣವರ್, ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿ ವಿಧಾನಸೌಧ ಆವರಣಕ್ಕೆ ಆಗಮಿಸಿದರು. ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಗಳಾದೇವಿ ಬಿರಾದಾರ, ಮಂಡಲ ಅಧ್ಯಕ್ಷ ಪರಶುರಾಮ ಪವಾರ, ವಿಜಯಪುರ ಜಿಪಂ ಉಪಾದ್ಯಕ್ಷ ಪ್ರಭುಗೌಡ ದೇಸಾಯಿ, ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಮುಖಂಡ ಶಂಕರಗೌಡ ಹಿರೇಗೌಡರ ಮಾತನಾಡಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಚಟುವಟಿಕೆಗಳು ನಡೆಯುತ್ತಿವೆ. ಪೊಲೀಸರನ್ನು ಗುಲಾಮರಂತೆ ಕಾಣಲಾಗುತ್ತಿದೆ. ಪೊಲಿಸ್ ಅಧಿಕಾರಿಗಳ ಆತ್ಮಹತ್ಯೆಗೆ ಸರಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಖಂಡಿಸಿ ತಹಶೀಲ್ದಾರ್ ಎಂ.ಎ.ಎಸ್.ಬಾಗವಾನಗೆ ಮನವಿ ಸಲ್ಲಿಸಲಾಯಿತು.