ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : ಬಸ್- ಕಾರ್ ನಡುವೆ ಢಿಕ್ಕಿ, ಸ್ಥಳದಲ್ಲಿಯೇ ನಾಲ್ವರ ಸಾವು
ಹಾಸನ,ಜು.10 : ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಇನೋವಾ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ರವಿವಾರ ಬೆಳ್ಳಂ ಬೆಳಿಗ್ಗೆ ನಡೆದಿದೆ. ನಗರದ ಹೊರ ವಲಯ ರಾಜೀವ್ ಇಂಜಿನಿಯರಿಂಗ್ ಕಾಲೇಜ್ ಎದುರು ಬೈಪಾಸ್ ಕೈಗಾರಿಕೆ ಪ್ರದೇಶದ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 2:30ರ ಸಮಯದಲ್ಲಿ ಅತೀ ವೇಗವಾಗಿ ಬಂದ ಇನೋವಾ ಕಾರು ಹಾಗೂ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಓರ್ವ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸಾವನ್ನಪ್ಪಿದವರು ಮಧ್ಯಪ್ರದೇಶದ ಮೂಲದವರಾಗಿದ್ದು, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ. ರಾಗಿಣಿ ಪಾಂಡೆ (28), ಅಭಿಷೇಕ್ ಗೌರವ್ (28) ಶುಭಂ ತಿವಾರಿ(26), ಹಾಗೂ ಇನೋವಾ ಕಾರು ಚಾಲಕನಾದ ಬೆಂಗಳೂರಿನ ಶಂಕರಮೂರ್ತಿ (30) ಮೃತಪಟ್ಟ ದುರ್ದೈವಿಗಳು.
ಇನೋವಾ ಕಾರಿನಲ್ಲಿ ಒಟ್ಟು 6 ಜನರು ಪ್ರಯಾಣಿಸುತ್ತಿದ್ದು, ಗಾಯಾಳುಗಳಾದ ಮಧ್ಯಪ್ರದೇಶ ಜಬ್ಲಾಪುರದ ಅಮನ್ ಪ್ರೀತಿ ಮತ್ತೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಜೆ ಇದ್ದುದ್ದರಿಂದ ದಕ್ಷಿಣ ಕನ್ನಡದ ಕೆಲ ಪ್ರವಾಸಿ ತಾಣಗಳನ್ನು ನೋಡಲು ಬಾಡಿಗೆ ಕಾರಿನಲ್ಲಿ ರಾತ್ರಿಯೇ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದರು.
ಅಪಘಾತದಲ್ಲಿ ಇನೋವಾ ಕಾರು ನಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗ ಪೂರ್ಣ ಜಜ್ಜಿ ಹೋಗಿದೆ. ಬಸ್‌ನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಬದಿಯ ತಡೆ ಕಂಬಿಗಳು ಇಲ್ಲದಿರುತ್ತಿದ್ದರೆ ನೂರು ಅಡಿ ಆಳಕ್ಕೆ ಬಸ್ ಉರುಳಿ ಇನ್ನು ಹೆಚ್ಚಿನ ಸಾವು-ನೋವುಗಳು ಸಂಭವಿಸುತ್ತಿತ್ತು.