ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಿ : ಅತೃಪ್ತ ಮುಖಂಡರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು
ಬೆಂಗಳೂರು, ಜು.10: ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿ ಕೊಳ್ಳಿ, ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದರಿಂದ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತಾಗುತ್ತದೆ ಎಂದು ಅತೃಪ್ತರಿಗೆ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದಾರೆ.
ರವಿವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವ ಕಾಯಿಲೆ ಇರುತ್ತೊ ಅದಕ್ಕೆ ಚಿಕಿತ್ಸೆ ನೀಡುವ ತಜ್ಞ ವೈದ್ಯರ ಬಳಿ ಮಾತ್ರ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ನಿಂತುಕೊಂಡು ನಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡರೆ ಯಾವ ಪ್ರಯೋಜನವು ಆಗುವುದಿಲ್ಲವೆಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಚಿವ ಸ್ಥಾನ ವಂಚಿತರಿಗೆ ಖರ್ಗೆ ತಿರುಗೇಟು ನೀಡಿದರು.
ಪಕ್ಷದ ಮುಖಂಡರು ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರೆ, ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ ಆಗುತ್ತದೆ. ನನ್ನದಲ್ಲದ ತಪ್ಪಿಗೆ ನಾನು ಟೀಕೆಗೆ ಗುರಿಯಾಗಿದ್ದೇನೆ. ನನಗಾಗಿರುವ ನೋವನ್ನು ಮುಖ್ಯಮಂತ್ರಿ ಬಳಿ ಹೇಳಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಅನ್ಯಾಯವನ್ನು ಸರಿಪಡಿಸುವುದು ನಾಯಕನ ಜವಾಬ್ದಾರಿ. ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವಿರುವವರ ಬಳಿ ನಮ್ಮ ನೋವನ್ನು ಹೇಳಿಕೊಳ್ಳಬೇಕು. ಅನಗತ್ಯವಾಗಿ ವಿಷಯವನ್ನು ದೊಡ್ಡದು ಮಾಡಿಕೊಂಡು ಹೋಗುತ್ತಿದ್ದರೆ ಎಲ್ಲರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಡಾ.ಅಂಬೇಡ್ಕರ್ ಆಚಾರ, ವಿಚಾರ, ಪ್ರಚಾರ ಅತಿ ಮುಖ್ಯ ಎಂದು ಹೇಳುತ್ತಿದ್ದರು. ನಮ್ಮ ಸರಕಾರವು ಸಾಕಷ್ಟು ಜನಪರವಾದ ಕೆಲಸಗಳನ್ನು ಮಾಡಿದೆ. ಅವುಗಳನ್ನು ಪ್ರಚಾರದ ಮೂಲಕ ಜನರಿಗೆ ಮುಟ್ಟಿಸುವ ಕೆಲಸವಾಗಬೇಕು. ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.
ದಿನೇಶ್‌ಗುಂಡೂರಾವ್‌ಗೆ ಅವರ ತಂದೆ(ಮಾಜಿ ಮುಖ್ಯಮಂತ್ರಿ ಗುಂಡೂರಾವ್)ಯಲ್ಲಿದ್ದ ನಾಯಕತ್ವದ ಗುಣವಿದೆ. ಯುವ ಹಾಗೂ ಹಿರಿಯ ಮುಖಂಡರನ್ನು ಸಮಾನವಾಗಿ ನಿರ್ವಹಿಸಿಕೊಂಡು ಮುಂದುವರೆಯಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯದಲ್ಲಿ ನಮ್ಮದೆ ಪಕ್ಷದ ಸರಕಾರವಿದೆ. ಆದುದರಿಂದ, ಪಕ್ಷ ಸಂಘಟನೆಗೆ ರಾಜ್ಯ ಸರಕಾರ ಹಾಗೂ ವಿಶೇಷವಾಗಿ ಮುಖ್ಯಮಂತ್ರಿಯ ಸಹಕಾರ ಅಗತ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು.